ನವದೆಹಲಿ:
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಪ್ರದೇಶಗಳನ್ನು ಗುರಿಯಾಗಿಸಿ ಭಾರತ ನಡೆಸಿದ ಆಪರೇಷನ್ ಸಿಂದೂರ ಕಾರ್ಯಾಚರಣೆ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚುತ್ತಿದೆ. ಇದರ ಬೆನ್ನಲ್ಲೇ ಶ್ರೀನಗರ, ಪಠಾಣ್‌ಕೋಟ್, ಲೇಹ್, ಜಮ್ಮು, ಚಂಡೀಗಢ, ಜೋಧಪುರ, ಶಿಮ್ಲಾ ಸೇರಿ ದೇಶದ 25 ವಿಮಾನ ನಿಲ್ದಾಣಗಳನ್ನು ಮುಂಜಾಗ್ರತಾ ಕ್ರಮವಾಗಿ ತಾತ್ಕಾಲಿಕ ಬಂದ್ ಮಾಡಲಾಗಿದೆ. ಇದರ ಜತೆಗೇ ವಿಮಾನಯಾನ ಸಂಸ್ಥೆಗಳು ಕೂಡ ಅನೇಕ ಮಾರ್ಗಗಳಲ್ಲಿ ಹಾರಾಟ ನಿಲ್ಲಿಸಿವೆ. ಇದರಿಂದ 300 ವಿಮಾನಗಳ ಸಂಚಾರ ರದ್ದಾಗಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಬುಧವಾರ ಮಧ್ಯರಾತ್ರಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ 9 ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿತ್ತು. ದಾಳಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದರು. ದಾಳಿಯ ಬೆನ್ನಲ್ಲೇ ಆರಂಭಿಕ ಹಂತದಲ್ಲಿ ಭಾರತೀಯ ವಿಮಾನಯಾನ ಸಂಸ್ಥೆಯು ಶ್ರೀನಗರ ಸೇರಿದಂತೆ ಉತ್ತರ ಭಾರತದ ಕೆಲವು ವಿಮಾನ ನಿಲ್ದಾಣಗಳನ್ನು ಸೇನಾ ಕಾರ್ಯಾಚರಣೆಗಾಗಿ ಮುಚ್ಚಿತ್ತು.
ದೆಹಲಿ ವಿಮಾನ ನಿಲ್ದಾಣದಿಂದ ಕನಿಚ್ಠ 35 ವಿಮಾನಗಳು ರದ್ದಾಗಿವೆ. ಅಮೆರಿಕನ್ ಏರ್‌ಲೈನ್ಸ್ ಸೇರಿದಂತೆ ವಿದೇಶಿ ವಿಮಾನಯಾನ ಸಂಸ್ಥೆಗಳು ದೆಹಲಿ ವಿಮಾನ ನಿಲ್ದಾಣದಿಂದ ತಮ್ಮ ಸೇವೆಗಳನ್ನು ರದ್ದುಗೊಳಿಸಿದೆ. ಮೂಲಗಳ ಪ್ರಕಾರ ದೆಹಲಿಯಿಂದ ಹೊರಡುವ 23 ದೇಶೀಯ, 4 ಅಂತಾರಾಷ್ಟ್ರೀಯ, ದೆಹಲಿಗೆ ಬರುವ 8 ದೇಶೀ ವಿಮಾನಗಳನ್ನು ಸೇವೆಯಲ್ಲಿ ವ್ಯತ್ಯಯವಾಗಿದೆ.ಇಂಡಿಗೋ ಕೂಡ ಸುಮಾರು 160 ದೇಶಿಯ ವಿಮಾನಗಳನ್ನು ರದ್ದುಗೊಳಿಸಿದೆ. ಸ್ಟೈಸ್‌ಜೆಟ್ ಸದ್ಯದ ಪರಿಸ್ಥಿತಿಯ ಕಾರಣದಿಂದ ಧರ್ಮಶಾಲಾ, ಲೇಹ್, ಜಮ್ಮು , ಶ್ರೀನಗರ ಮತ್ತ ಅಮೃತಸರ ನಿಲ್ದಾಣಗಳು ಮುಂದಿನ ಸೂಚನೆ ಬರುವ ತನಕ ಮುಚ್ಚಲಾಗಿದೆ ಎಂದು ಹೇಳಿದೆ.
ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು ಮೇ 10ರ ತನಕ ಶ್ರೀನಗರ , ಅಮೃತಸರ ಸೇರಿದಂತೆ 9 ವಿಮಾನ ನಿಲ್ದಾಣಗಳಿಗೆ ಹಾರಾಟ ರದ್ದುಗೊಳಿಸಿದೆ. ಜಮ್ಮು, ಶ್ರೀನಗರ, ಲೇಹ್, ಜೋಧ್‌ಪುರ, ಅಮೃತಸರ, ಭುಜ್, ಜಾಮನಗರ, ಚಂಡೀಗಢ, ರಾಜ್‌ಕೋಟ್ ನಿಲ್ದಾಣಗಳಿಗೆ ಶನಿವಾರ ತನಕ ವಿಮಾನ ಸ್ಥಗಿತಗೊಳಿಸಿರುವುದಾಗಿ ಹೇಳಿದೆ.
ಶ್ರೀನಗರ, ಲೇಹ್, ಜಮ್ಮು, ಅಮೃತಸರ, ಪಠಾಣ್‌ಕೋಟ್, ಚಂಡೀಗಢ, ಜೋಧ್‌ಪುರ, ಜೈಸಲ್ಮೇರ್, ಶಿಮ್ಲಾ, ಧರ್ಮಶಾಲಾ, ಜಾಮ್‌ನಗರ, ಭುಂತರ್ (ಹಿಮಾಚಲ ಪ್ರದೇಶ), ಲುಧಿಯಾನ, ಕಿಶನ್‌ಗಢ (ರಾಜಸ್ಥಾನ), ಪಟಿಯಾಲ, ಬಿಕಾನೇರ್ (ರಾಜಸ್ಥಾನ), ಹಲ್ವಾರ (ಪಂಜಾಬ್), ಮುಂದ್ರಾ (ಗುಜರಾತ್), ಪೋರಬಂದರ್ (ಗುಜರಾತ್), ರಾಜ್‌ಕೋಟ್, ಕಾಂಡ್ಲಾ (ಗುಜರಾತ್), ಕೇಶೋದ್ (ಗುಜರಾತ್), ಭುಜ್ (ಗುಜರಾತ್), ಥೋಯಿಸ್ (ಲಡಾಖ್).
