ಮೈಸೂರು:
ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಪ್ರಾಸಿಕ್ಯೂಷನ್’ಗೆ ಅನುಮತಿ ನೀಡಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಸೆ.9ಕ್ಕೆ ಮುಂದೂಡಿದ್ದು, ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2 ದಿನಗಳ ಕಾಲ ಮೈಸೂರಿಗೆ ಭೇಟಿ ನೀಡಿದ್ದಾರೆ.
ಮುಡಾ ಹಗರಣ ಸಂಬಂಧ ಬಿಜೆಪಿ ಪಾದಯಾತ್ರೆ ಹಮ್ಮಿಕೊಂಡಿತ್ತು. ಇದಕ್ಕೆ ತಿರುಗೇಟು ನೀಡುವ ಸಲುವಾಗಿ ಕಾಂಗ್ರೆಸ್ ಕೂಡ ಬೃಹತ್ ಸಮಾವೇಶ ನಡೆಸಿತ್ತು. ಈ ಕಾರಣದಿಂದ ಈ ಮೊದಲು ನಿಗದಿಯಾಗಿದ್ದ ಮೈಸೂರು ಪ್ರವಾಸವನ್ನು ಮುಖ್ಯಮಂತ್ರಿಗಳು ರದ್ದುಗೊಳಿಸಿದ್ದರು.
ಇದರಂತೆ ಸೋಮವಾರ ಮುಖ್ಯಮಂತ್ರಿಗಳು ಮೈಸೂರಿಗೆ ಭೇಟಿ ನೀಡಿದ್ದು, ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಕ್ಷೇತ್ರದ ಶಾಸಕರು ಹಾಗೂ ಪಕ್ಷದ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು.
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡಿ ಬೆಟ್ಟದ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದು, ಚಾಮುಂಡಿ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರದ ಮೊದಲ ಸಭೆಯ ಅಧ್ಯಕ್ಷತೆ ವಹಿಸಿ ದೇವಸ್ಥಾನದ ಅಭಿವೃದ್ಧಿ ಹಾಗೂ ಮೂಲ ಸೌಕರ್ಯಗಳ ಸುಧಾರಣೆಗೆ ನೀಲನಕ್ಷೆ ರೂಪಿಸಲಿದ್ದಾರೆ. ಇದೇ ವೇಳೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ.
ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ದಸರಾ ಮಹೋತ್ಸವದ ಸಿದ್ಧತೆಗಳನ್ನು ಪರಿಶೀಲಿಸಲಿದ್ದಾರೆ ಮತ್ತು ಕೆಆರ್ ಆಸ್ಪತ್ರೆಯ ಅಭಿವೃದ್ಧಿ ಕಾರ್ಯಗಳ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ. ಇದೇ ವೇಳೆ ದೇವರಾಜ ಮಾರುಕಟ್ಟೆ ಕಟ್ಟಡವನ್ನು ಮರುನಿರ್ಮಾಣ ಯೋಜನೆಯನ್ನೂ ಪರಿಶೀಲಿಸಲಿದ್ದಾರೆಂದು ತಿಳಿದುಬಂದಿದೆ.ಈ ನಡುವೆ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆಗೆ ರಾಜಮನೆತನದಿಂದ ವಿರೋಧ ವ್ಯಕ್ತವಾಗಿದೆ.
ಈ ಹಿಂದೆ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ಆಕ್ಷೇಪ ವ್ಯಕ್ತಪಡಿಸಿ ಪ್ರಮೋದಾದೇವಿ ಒಡೆಯರ್ ಅವರು ಜುಲೈ 26 ರಂದು ತಡೆಯಾಜ್ಞೆ ತಂದಿದ್ದರು. ಈ ತಡೆಯಾಜ್ಞೆ ತೆರವುಗೊಳಿಸುವಂತೆ ಸರ್ಕಾರ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ, ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸರ್ಕಾರ ಜೂನ್ 28 ರಂದು ಆದೇಶ ಹೊರಡಿಸಿತ್ತು. ಜುಲೈ 1 ರಿಂದಲೇ ಕಾಯ್ದೆ ಜಾರಿಗೆ ಬಂದಿದೆ. ಹೀಗಾಗಿ ತಡೆಯಾಜ್ಞೆ ಮಧ್ಯಂತರ ಆದೇಶ ತೆರವು ಮಾಡಬೇಕು ಎಂದು ಮನವಿ ಮಾಡಿದರು.
ಪ್ರಮೋದಾದೇವಿ ಒಡೆಯರ್ ಪರ ವಕೀಲರು ಮತ್ತೆ ಮಧ್ಯಂತರ ಆದೇಶವನ್ನು ನೀಡಬೇಕು ಎಂದು ಕೋರಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಪ್ರಕರಣ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಒಡೆಯರ್ ಪರ ವಕೀಲರಿಗೆ ಸೂಚನೆ ನೀಡಿ, ವಿಚಾರಣೆಯನ್ನು ಸೆಪ್ಟೆಂಬರ್ 5ಕ್ಕೆ ಮುಂದೂಡಿದೆ.