ನವದೆಹಲಿ :
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ವಂಚಿತರಾಗಿದ್ದ ವಿನೇಶ್ ಫೋಗಟ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಬಾರಿ ಸುದ್ದಿಯಾಗಿರುವುದು ರಾಷ್ಟ್ರೀಯ ಉದ್ದೀಪನ ಮದ್ದು ನಿರೋಧಕ ಸಂಸ್ಥೆ (ನಾಡಾ) ಕಳುಹಿಸಿದ ನೋಟಿಸ್ನಿಂದ. ಸೆಪ್ಟೆಂಬರ್ 9 ರಂದು ಸೋನೆಪತ್‌ನ ಖಾರ್ಖೋಡಾ ಗ್ರಾಮದ ತನ್ನ ಮನೆಯಲ್ಲಿ ವಿನೇಶ್ ಡೋಪಿಂಗ್ ವಿರೋಧಿ ಪರೀಕ್ಷೆಗೆ ಹಾಜರಿರಬೇಕಿತ್ತು. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿದೆ ಅವರು ಡೋಪಿಂಗ್ ಟೆಸ್ಟ್ ತಪ್ಪಿಸಿಕೊಂಡಿದ್ದರು. ಈ ಬಗ್ಗೆ 14 ದಿನಗಳಲ್ಲಿ ಉತ್ತರ ನೀಡುವಂತೆ ಇದೀಗ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ ನೋಟಿಸ್ ಜಾರಿಗೊಳಿಸಿದೆ.
ರಾಷ್ಟ್ರೀಯ ಕುಸ್ತಿಪಟುಗಳು ತಮ್ಮ ಚಲನವಲನದ ಬಗ್ಗೆ ನಾಡಾಗೆ ನಿಖರ ಮಾಹಿತಿ ನೀಡಬೇಕಾಗುತ್ತದೆ. ಅಲ್ಲದೆ ವರ್ಷವೊಂದರಲ್ಲಿ ಮೂರು ಬಾರಿ ಡೋಪಿಂಗ್ ಟೆಸ್ಟ್ಗೆ ಹಾಜರಾಗಬೇಕು. ಅದರಂತೆ ಸೆಪ್ಟೆಂಬರ್ 9 ರಂದು ಡೋಪಿಂಗ್ ಟೆಸ್ಟ್ಗೆ ಸಮಯ ನಿಗದಿ ಮಾಡಲಾಗಿತ್ತು. ಆದರೆ ಅಂದು ವಿನೇಶ್ ಫೋಗಟ್ ಮನೆಯಲ್ಲಿರಲಿಲ್ಲ. ಇದು ನಾಡಾ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ..
ನಾಡಾ ನೋಂದಾಯಿತ ಟೆಸ್ಟಿಂಗ್ ಪೂಲ್ ನಲ್ಲಿ ನೋಂದಣಿ ಮಾಡಿಕೊಂಡ ಎಲ್ಲಾ ಕ್ರೀಡಾಪಟುಗಳು ಡೋಪ್ ಪರೀಕ್ಷೆಗೆ ತಮ್ಮ ಲಭ್ಯತೆಯ ಬಗ್ಗೆ ತಿಳಿಸಬೇಕು. ಈ ನಿಯಮಗಳ ಪ್ರಕಾರ, ಕ್ರೀಡಾಪಟು ಮಾಹಿತಿ ನೀಡಿದ ಸ್ಥಳದಲ್ಲಿ ಲಭ್ಯವಿಲ್ಲದಿದ್ದರೆ, ಎಲ್ಲಿದ್ದಾರೆ ಎಂಬ ಮಾಹಿತಿಯನ್ನು ಒದಗಿಸಲು ವಿಫಲವಾಗಿದೆ ಎಂದು ಪರಿಗಣಿಸಲಾಗುತ್ತದೆ.
ಸೆಪ್ಟೆಂಬರ್ 9 ರಂದು ವಿನೇಶ್ ಫೋಗಟ್ ಸೋನಿಪತ್‌ನ ಖಾರ್ಖೋಡಾ ಗ್ರಾಮದಲ್ಲಿರುವ ತನ್ನ ಮನೆಯಲ್ಲಿ ಡೋಪ್ ಪರೀಕ್ಷೆಗೆ ಲಭ್ಯವಿಲ್ಲದ ಕಾರಣ ತನ್ನ ವಾಸಸ್ಥಳದ ಬಗ್ಗೆ ಮಾಹಿತಿ ನೀಡದೆ ತಪ್ಪು ಮಾಡಿದೆ ಎಂದು ನಾಡಾ ತನ್ನ ನೋಟಿಸ್‌ನಲ್ಲಿ ತಿಳಿಸಿದೆ.
ಡೋಪಿಂಗ್ ವಿರೋಧಿ ನಿಯಮಗಳ ಅಡಿಯಲ್ಲಿ ನಿವಾಸದ ಮಾಹಿತಿ ಅವಶ್ಯಕತೆಗಳನ್ನು ಅನುಸರಿಸಲು ನಿಮ್ಮ ಸ್ಪಷ್ಟ ವೈಫಲ್ಯದ ಬಗ್ಗೆ ನಿಮಗೆ ತಿಳಿಸಲು ಔಪಚಾರಿಕ ಸೂಚನೆಯನ್ನು ನೀಡಲಾಗಿದೆ ಎಂದು ನಾಡಾ ಹೇಳಿದೆ. ಈ ವಿಷಯದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು, ಈ ಇದರ ಬಗ್ಗೆ ಸ್ಪಷ್ಟೀಕರಣವನ್ನು ನೀಡಬೇಕು. ನಿಮ್ಮನ್ನು ಪರೀಕ್ಷಿಸಲು ಆ ದಿನ ಡೋಪ್ ಕಂಟ್ರೋಲ್ ಅಧಿಕಾರಿ (ಡಿಸಿಒ) ಅವರನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಆದರೆ ನೀವು ಸ್ಥಳದಲ್ಲಿ ಇಲ್ಲದ ಕಾರಣ ಟೆಸ್ಟ್ ನಡೆಸಲು ಸಾಧ್ಯವಾಗಿಲ್ಲ. ಹೀಗಾಗಿ ಇದಕ್ಕೆ ಸ್ಪಷ್ಟ ಕಾರಣ ನೀಡಬೇಕೆಂದು ತಿಳಿಸಲಾಗಿದೆ.
ಒಂದು ವೇಳೆ ವಿನೇಶ್ ಫೋಗಟ್ ಈ ತಪ್ಪನ್ನು ಒಪ್ಪಿಕೊಳ್ಳಬೇಕು ಅಥವಾ ಸುಮಾರು 60 ನಿಮಿಷಗಳ ಕಾಲ ಆ ಸ್ಥಳದಲ್ಲಿದ್ದೆ ಎಂಬುದಕ್ಕೆ ಸಾಕ್ಷ್ಯವನ್ನು ಒದಗಿಸಬೇಕು. ಇದಾಗ್ಯೂ ವಿನೇಶ್ ಫೋಗಟ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿಲ್ಲ. ಏಕೆಂದರೆ ಅಥ್ಲೀಟ್ 12 ತಿಂಗಳಲ್ಲಿ ಮೂರು ಬಾರಿ ಸ್ಥಳದ ಮಾಹಿತಿಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದರೆ ಮಾತ್ರ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಹೀಗಾಗಿ ವಿನೇಶ್ ಫೋಗಟ್ ಈ ಬಗ್ಗೆ 14 ದಿನಗಳಲ್ಲಿ ಸ್ಪಷ್ಟನೆ ನೀಡಿದರೆ ಸಾಕಾಗುತ್ತದೆ.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 100 ಗ್ರಾಂ ಹೆಚ್ಚಿನ ತೂಕದ ಕಾರಣ 50 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ತಪ್ಪಿಸಿಕೊಂಡ ವಿನೇಶ್ ಫೋಗಟ್ ಈಗಾಗಲೇ ನಿವೃತ್ತಿ ಘೋಷಿಸಿದ್ದಾರೆ. ಅಲ್ಲದೆ ಇದೀಗ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವ ಅವರು ಮುಂಬರುವ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಜೂಲಾನಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.