ನಂದಿಗಿರಿಧಾಮ ಆಕರ್ಷಕ ವಿನ್ಯಾಸ ಕಾಮಗಾರಿಗಳಿಗೆ ಸರ್ಕಾರದಿಂದ 10 ಕೋಟಿ!!

ಚಿಕ್ಕಬಳ್ಳಾಪುರ : 

     ಚಿಕ್ಕಬಳ್ಳಾಪುರ ಜಿಲ್ಲೆಯ ಸುಪ್ರಸಿದ್ಧ ನಂದಿಗಿರಿಧಾಮವನ್ನು ಅಂತರಾಷ್ಟ್ರೀಯ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿ ಪಡಿಸಲು ಆಕರ್ಷಕ ವಿನ್ಯಾಸ ಕಾಮಗಾರಿಗಳಿಗೆ ಸರ್ಕಾರ ಹತ್ತು ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

     ಅವರು ಇಂದು ನಂದಿಗಿರಿಧಾಮದ ನೆಹರು ನಿಲಯದಲ್ಲಿ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ಜೊತೆ ಗಿರಿಧಾಮದ ಅಭಿವೃದ್ಧಿ ಕುರಿತು ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಕೆಯ ನಂದಿಗಿರಿಧಾಮಕ್ಕೆ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಹಿನ್ನೆಲೆಯಿದ್ದು, ಅಂತರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವಾಗಿ ಈಗಾಗಲೇ ಗಮನ ಸೆಳೆದಿದೆ. ಈ ಗಿರಿಧಾಮದಲ್ಲಿ ಅಮೂಲ್ಯ ಸಸ್ಯ ಸಂಪತ್ತಿದ್ದು, ಜಾಗತಿಕ ಮಟ್ಟದಲ್ಲಿ ಪ್ರವಾಸಿಗರನ್ನು ಸೆಳೆಯಲು ಮತ್ತಷ್ಟು ಅಗತ್ಯ ಮೂಲ ಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸಬೇಕಾಗಿದೆ. ಗಿರಿಧಾಮದ ಸುತ್ತಮುತ್ತಲ ಜಿಲ್ಲೆಗಳು ಮತ್ತು ರಾಜ್ಯಗಳ ವ್ಯಾಪ್ತಿಯಲ್ಲಿ ಸುಮಾರು ಎರಡು ಕೋಟಿ ಜನರಿದ್ದಾರೆ.

     ರಾಜಧಾನಿ ಬೆಂಗಳೂರು ಮತ್ತು ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಅತ್ಯಂತ ಸಮೀವಿದ್ದು, ಅಂತರಾಷ್ಟ್ರೀಯ ಪ್ರವಾಸಿಗರು ಬರಲು ಯೋಗ್ಯ ಸ್ಥಳವಾಗಿದೆ. ನಂದಿಗಿರಿಧಾಮದ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಸಂಪೂರ್ಣ ಭರವಸೆ ನೀಡಿದ್ದು, ಈ ಬಾರಿಯ ಬಜೆಟ್ ನಲ್ಲಿ ಗಿರಿಧಾಮದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಸಿಗುವ ನಿರೀಕ್ಷೆ ಇದೆ. ಗಿರಿಧಾಮದಲ್ಲಿ ಪರಿಸರ ಸಂರಕ್ಷಣೆ ಮತ್ತು ನೈರ್ಮಲ್ಯ ಕಾಪಾಡುವ ದೃಷ್ಟಿಯಿಂದ ಗಿರಿಧಾಮದಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಈಗಾಗಲೇ ಹತ್ತು ಕೋಟಿ ರೂಪಾಯಿಗಳಲ್ಲಿ ಗಿರಿಧಾಮ ಅಭಿವೃದ್ಧಿ ಪಡಿಸಲು ಕೈಗೊಳ್ಳಲು ಕಾಮಗಾರಿಗಳ ನೀಲಿನಕ್ಷೆ ತಯಾರಾಗಿದೆ. ಟೆಂಡರ್ ಕೂಡಾ ಕರೆದಿದ್ದು ಇನ್ನು ನಾಲ್ಕು ತಿಂಗಳ ಒಳಗಾಗಿ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ನಂದಿಗಿರಿಧಾಮ ಅಭಿವೃದ್ಧಿ ಪ್ರಾಧಿಕಾರ ರಚನೆ ಕುರಿತ ಪ್ರಸ್ತಾವನೆ ಸರ್ಕಾರದ ಮುಂದಿದ್ದು, ಪ್ರವಾಸೋದ್ಯಮ ಇಲಾಖೆಯೊಂದರ ಅಡಿಯಲ್ಲಿಯೇ ಅಭಿವೃದ್ಧಿ ಮಾಡಲಾಗುವುದು. ಈಗಾಗಲೇ ವಿವಿಧ ಇಲಾಖೆಗಳು ಪ್ರವಾಸೋದ್ಯಮ ಇಲಾಖೆಗೆ ಜವಾಬ್ದಾರಿಯನ್ನು ಹಸ್ತಾಂತರಿಸುವ ಪ್ರಕ್ರಿಯೆ ನಡೆಸುತ್ತಿವೆ.

      ನಂದಿಗಿರಿಧಾಮಕ್ಕೆ ರೋಪ್ ವೇ ಅಳವಡಿಸುವ ದಿನಗಳು ದೂರವಿಲ್ಲ. ರೋಪ್ ವೇ ಅಳವಡಿಸುವ ಕುರಿತು ಒಂದು ಖಾಸಗಿ ಏಜೆನ್ಸಿಯೊಂದಿಗೆ ಚರ್ಚೆ ನಡೆಸಿದ್ದು, ಬಹು ನಿರೀಕ್ಷಿತ ರೋಪ್ ವೇ ಕನಸು ನನಸಾಗಲಿದೆ ಎಂದು ತಿಳಿಸಿದರು.

      ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಗಿರಿಧಾಮದ ಪಾರ್ಕಿಂಗ್ ಗಾಗಿ ಹತ್ತು ಎಕರೆ ಭೂಮಿಯನ್ನು ಮೀಸಲಿಡಲಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಸಚಿವರು ಅಧಿಕಾರಿಗಳೊಂದಿಗೆ ನಂದಿಗಿರಿಧಾಮದ ಪರಿವೀಕ್ಷಣೆ ನಡೆಸಿ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ನಿರ್ದೇಶಕ ರಾಕೇಶ್, ಜಿಲ್ಲಾಧಿಕಾರಿ ಆರ್.ಲತಾ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap