ಬೆಂಗಳೂರು:
ಹಿಂದೂಗಳ ಖ್ಯಾತ ಪವಿತ್ರ ಧಾರ್ಮಿಕ ಯಾತ್ರಾತಾಣ ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ ಮತ್ತೆ 2 ಸಾವಿರ ಮೆಟ್ರಿಕ್ ಟನ್ ನಂದಿನಿ ತುಪ್ಪ ನೀಡುವಂತೆ ಕರ್ನಾಟಕ ಹಾಲು ಒಕ್ಕೂಟಕ್ಕೆ ಬೇಡಿಕೆ ಇಟ್ಟಿದೆ.
ತಿರುಪತಿಯ ಲಡ್ಡು ವಿವಾದ ಬಳಿಕ ಕರ್ನಾಟಕದ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಾಗಿದ್ದು, ತಿರುಪತಿ ತಿರುಮಲ ದೇಗುಲದಿಂದ ಇನ್ನೂ ಹೆಚ್ಚಿನ ತುಪ್ಪಕ್ಕೆ ಬೇಡಿಕೆ ಬಂದಿದೆ. ಈಗಾಗಲೇ ಕಳೆದ 1 ವರ್ಷದಲ್ಲಿ 3200 ಮೆಟ್ರಿಕ್ ಟನ್ತುಪ್ಪ ಟಿಟಿಡಿಗೆ ಪೂರೈಕೆ ಮಾಡಲಾಗಿದ್ದು, ಈಗ ಮತ್ತೆ 2000 ಮೆಟ್ರಿಕ್ ಟನ್ ತುಪ್ಪಕ್ಕೆ ಟಿಟಿಡಿ ಬೇಡಿಕೆ ಇಟ್ಟಿದೆ ಎಂದು ತಿಳಿದುಬಂದಿದೆ.
ಲಡ್ಡು ವಿವಾದ ಬಳಿಕ ಬೇರೆ ಸಂಸ್ಛೆಗಳಿಂದ ತುಪ್ಪ ಖರೀದಿ ಮಾಡಲು ಟಿಟಿಡಿ ಹಿಂದೇಟು ಹಾಕುತ್ತಿದೆ. ಟಿಟಿಡಿಗೆ ವಾರ್ಷಿಕ 3200 ಟನ್ ಆಗಿರುತ್ತದೆ. ಇಷ್ಟೂ ಪ್ರಮಾಣದ ತುಪ್ಪವನ್ನು ಟಿಟಿಡಿ ಕೆಎಂಎಫ್ ನಿಂದಲೇ ಪೂರೈಸಿಕೊಳ್ಳಲು ನಿರ್ಧರಿಸಿದೆ. ನಂದಿನಿ ತುಪ್ಪವನ್ನು ಮಾತ್ರ ಖರೀದಿಸಲು ಟಿಟಿಡಿ ನಿರ್ಧರಿಸಿದೆ.
ಲಡ್ಡು ತಯಾರಿಕೆಗೆ ಹೆಚ್ಚುವರಿ ತುಪ್ಪ ಪೂರೈಕೆ ಮಾಡುವಂತೆ KMF ಬಳಿ TTD ಮನವಿ ಮಾಡಿಕೊಂಡಿದೆ. ಟೆಂಡರ್ ಷರತ್ತಿನ ಪ್ರಕಾರ 2000 ಮೆಟ್ರಿಕ್ ಟನ್ ತುಪ್ಪ ರವಾನೆ ಮಾಡಲು KMF ಮುಂದಾಗಿದೆ. ಆರು ತಿಂಗಳಲ್ಲಿ 2000 ಟನ್ ತುಪ್ಪ ಪೂರೈಸುವಂತೆ ಟಿಟಿಡಿ ಮನವಿ ಮಾಡಿದ್ದು, ಈ ಮೊದಲು 3 ತಿಂಗಳಿಗೆ 600 ಟನ್ ಪೂರೈಸುವಂತೆ ಟಿಟಿಡಿ ಬೇಡಿಕೆ ಇಟ್ಟಿತ್ತು.
ಕಳೆದೊಂದು ವರ್ಷದಲ್ಲಿ ಕೆಎಂಎಫ್ ಟಿಟಿಡಿಗೆ ಬರೋಬ್ಬರಿ 3200 ಮೆಟ್ರಿಕ್ ಟನ್ ತುಪ್ಪ ಪೂರೈಕೆ ಮಾಡಿದ್ದು, ಸದ್ಯ ಟಿಟಿಡಿಗೆ ಕೆಎಂಎಫ್ ಸಿಂಗಲ್ ಸೆಲ್ಲರ್ ಸಂಸ್ಥೆಯಾಗಿದೆ. ರಾಜ್ಯದಲ್ಲಿ ಕಳೆದೊಂದು ವರ್ಷದಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಟನ್ ತುಪ್ಪ ಮಾರಾಟ ಮಾಡಲಾಗಿದ್ದು, ನೆರೆಯ ರಾಜ್ಯಗಳಿಗೆ 500 ಟನ್‌ಗೂ ಹೆಚ್ಚು ತುಪ್ಪ ಪೂರೈಕೆ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇಕಡಾ 30ರಷ್ಟು ತುಪ್ಪ ಹೆಚ್ಚುವರಿ ಮಾರಾಟ ಮಾಡಲಾಗಿದ್ದು, ಇದರಲ್ಲಿ ಶೇಕಡಾ 60ರಷ್ಟು ತುಪ್ಪ ಟಿಟಿಡಿಗೆ ಪೂರೈಕೆ ಮಾಡಲಾಗುತ್ತಿದೆ.
ತಿರುಪತಿ ಲಡ್ಡು ತಯಾರಿಕೆಗೆ ಕಳೆದ 20 ವರ್ಷದಿಂದ ನಂದಿನಿ ತುಪ್ಪ ಬಳಕೆ ಮಾಡುತ್ತಿದ್ದು, ಆದರೆ 2022-23 ನೇ ಸಾಲಿನಲ್ಲಿ ದರದ ವಿಚಾರದಲ್ಲಿ ನಂದಿನಿ ತುಪ್ಪ ಪೂರೈಕೆ ಸ್ಥಗಿತವಾಗಿತ್ತು. 2013 ಮತ್ತು 2018 ರ ನಡುವೆ ತಿರುಪತಿ ಲಡ್ಡು ತಯಾರಿಸಲು 3,000 ಟನ್ ನಂದಿನಿ ತುಪ್ಪವನ್ನು ಖರೀದಿ ಮಾಡಲಾಗಿತ್ತು. 2019 ರಲ್ಲಿ 1,700 ಟನ್ ಪೂರೈಸಿದ್ದ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್), ಇತ್ತೀಚಿನ ವರ್ಷಗಳಲ್ಲಿ ಪೂರೈಕೆಗಾಗಿ ಟಿಟಿಡಿ ಮುಂದಿಟ್ಟಿದ್ದ ಬಿಡ್ ಗೆಲ್ಲಲು ವಿಫಲವಾಗಿತ್ತು.
2020 ಮತ್ತು 2024 ರ ನಡುವೆ, ದೇವಾಲಯದ ಅಧಿಕಾರಿಗಳು ತುಪ್ಪ ಪೂರೈಕೆಗಾಗಿ ಮಂಡಿಸಿದ ಸ್ಪರ್ಧಾತ್ಮಕ ಬಿಡ್‌ಗಳನ್ನು ಗೆಲ್ಲಲು ಕೆಎಂಎಫ್ ವಿಫಲವಾಗಿತ್ತು. ಅಂದು ಟಿಟಿಡಿ ಕಡಿಮೆ ದರಕ್ಕೆ ತುಪ್ಪ ನೀಡಲು ಮುಂದಾಗಿದ್ದ ಸಂಸ್ಥೆಯಿಂದ ತುಪ್ಪ ಖರೀದಿ ಮಾಡಿತ್ತು. ಆ ಬಳಿಕ ಕಳಪೆ ತುಪ್ಪು ಮತ್ತು ಕಲಬೆರಕೆ ಲಡ್ಡು ವಿವಾದ ಭುಗಿಲೆದ್ದಿತ್ತು. ಬಳಿಕ ಚಂದ್ರಬಾಬು ನಾಯ್ಡು ಆಂಧ್ರ ಪ್ರದೇಶ ಸಿಎಂ ಆದ ಬಳಿಕ ಟಿಟಿಡಿ ಕೆಎಂಎಫ್ ನಿಂದ ಮತ್ತೆ ತುಪ್ಪ ಖರೀದಿ ಮಾಡಲು ಆರಂಭಿಸಿತು.
