ಆರನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಡಾ.ಬಿ.ನಂಜುಂಡಸ್ವಾಮಿ

 

ಗುಬ್ಬಿ:

     ಪುಸ್ತಕಗಳ ಓದುವವರ ಸಂಖ್ಯೆ ವಿರಳವಾದ ಸಂದರ್ಭದಲ್ಲಿ ಮನೆಯನ್ನೇ ಗ್ರಂಥಾಲಯ ಮಾಡಿ ಪ್ರತಿ ಪುಸ್ತಕದ ಮುನ್ನುಡಿಯಿಂದ ಬೆನ್ನುಡಿಯವರೆಗೆ ಓದುವ ವ್ಯಕ್ತಿ ಡಾ.ಬಿ.ನಂಜುಂಡಸ್ವಾಮಿ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದೇ ಅರ್ಥಪೂರ್ಣ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ.

     ನಾಡಿನ ಶ್ರೇಷ್ಠ ವಿಮರ್ಶಕರ ಪಟ್ಟಿಯಲ್ಲಿ ನಂಜುಂಡಸ್ವಾಮಿ ಅವರು ಕೂಡ ಒಬ್ಬರು ಎನ್ನುವುದು ನಮ್ಮ ಗುಬ್ಬಿ ತಾಲ್ಲೂಕಿನ ಹೆಮ್ಮೆ. ಖ್ಯಾತ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ನಿಕಟ ಸಂಪರ್ಕದಲ್ಲಿದ್ದು ನಾಡಿನ ಐತಿಹಾಸಿಕ ಹಿನ್ನಲೆಯ ಮಠಗಳ ಅಧ್ಯಯನ ನಡೆಸಿ ಅದನ್ನು ಲಿಖಿತ ರೂಪದಲ್ಲಿ ದಾಖಲೆ ಸೃಷ್ಟಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. 50 ಕ್ಕೂ ಅಧಿಕ ಕೃತಿಗಳನ್ನು ರಚಿಸಿ ಸಂಪಾದಿಸಿ ಅಧಿಕೃತ ಮಾಹಿತಿ ದಾಖಲೆ ಸಹಿತ ಸಾಹಿತ್ಯ ಸಂಗ್ರಹದಲ್ಲಿ ಏಕೈಕ ಪಂಡಿತ ಎಂದರೂ ಅತಿಶಯೋಕ್ತಿಯಲ್ಲ. ಗುಬ್ಬಿಯ ಶ್ರೀ ಗೋಸಲ ಚನ್ನಬಸವೇಶ್ವರರ ಚರಿತ್ರೆಯ ಪುಸ್ತಕ ರಚಿಸಲು ಗುರುಗಳ ಮೂಲ ಸ್ಥಾನ ಚಾಮರಾಜನಗರ ಜಿಲ್ಲೆ ಹರದನಹಳ್ಳಿ ಗೆ ಹೋಗಿ ಅಲ್ಲಿ ದಾಖಲೆಗಳನ್ನು ಸಂಗ್ರಹಿಸಿ ಉತ್ತಮ ಕೃತಿ ರಚಿಸಿ ಸ್ವಾಮಿಯ ಭಕ್ತರಿಗೆ ಅವರ ಪವಾಡ ಬಗ್ಗೆ ವಿವರಿಸಿದ್ದಾರೆ.

    ಜಿ.ಹೊಸಹಳ್ಳಿಯ ಅರಸು ಮನೆತನದವರ ಮೂಲಕ ಅಧಿಕೃತ ದಾಖಲೆಯನ್ನು ಕಲೆ ಹಾಕಿದ ನಂಜುಂಡಸ್ವಾಮಿ ವೀರಶೈವ ಧರ್ಮ ಸಂಸ್ಕೃತಿ ಸಾಹಿತ್ಯ ಕುರಿತ ಆಳವಾದ ಅಧ್ಯಯನ ನಡೆಸಿದವರು 300 ಕ್ಕೂ ಅಧಿಕ ಲೇಖನಗಳು ಪ್ರಕಟಗೊಂಡಿವೆ. ಶಿವಗಂಗಾ ಕ್ಷೇತ್ರ, ಸಿದ್ಧಾಂತ ಶಿಖಾಮಣಿ, ಹೊನ್ನಸಿರಿ, ಕಾಯಕ ಯೋಗಿ, ಹೊನ್ನುಡಿಕೆ ದರ್ಶನ, ಕಲ್ಪಸಿರಿ ಹೀಗೆ ಅನೇಕ ಕೃತಿಗಳನ್ನು ನಾಡಿಗೆ ನೀಡಿ ಎಲೆ ಮರೆಯ ಕಾಯಿಯಂತೆ ಆಯುರ್ವೇದ ವೈದ್ಯ ವೃತ್ತಿಯನ್ನು ನಡೆಸಿಕೊಂಡು ಸಾಹಿತ್ಯ ಕೃಷಿ ನಡೆಸಿದವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಗುರುತಿಸಿ ಸಮ್ಮೇಳನಾಧ್ಯಕ್ಷರಾಗಿ ಘೋಷಣೆ ಮಾಡಿದ್ದೇ ಅರ್ಥಪೂರ್ಣ. 

   ತಾಳೆಗರಿ, ತಾಮ್ರ ಶಾಸನ ಓದುವ ಏಕೈಕ ಪಂಡಿತರು ಎಂಬ ಹೆಗ್ಗಳಿಕೆ ಗಳಿಸಿ ಮನೆಯನ್ನೇ ಗ್ರಂಥಾಲಯ ಮಾಡಿಕೊಂಡು ಎಲ್ಲಾ ಪುಸ್ತಕವನ್ನು ಓದುವ ಜೊತೆಗೆ ಕನ್ನಡ ವ್ಯಾಕರಣ ತಿದ್ದುವ ಹಾಗೂ ತಪ್ಪಿನ ಅಕ್ಷರಗಳ ಬಗ್ಗೆ ಸಂಬಂಧಿಸಿದ ಲೇಖಕರಿಗೆ ಪತ್ರ ಮೂಲಕ ತಿಳಿಸುವ ನೇರವಾದಿಯಾಗಿ ಕಂಡಿದ್ದಾರೆ. 64 ನೇ ವಯಸ್ಸಿನಲ್ಲಿ ಅವರ ಸಾಹಿತ್ಯಾಸಕ್ತಿ ಹದಿಹರೆಯದ ವಯಸ್ಸು ಮನಸ್ಸು ತೋರುತ್ತದೆ. ಅವರ ಸಾಹಿತ್ಯ ಕೃಷಿಗೆ ಉತ್ತೇಜನ ನೀಡುವ ಸಮ್ಮೇಳನ ಮತ್ತಷ್ಟು ಚಿಂತನೆ, ಅರಿವು, ಸಾಹಿತ್ಯಾಸಕ್ತಿ ಮೂಡಿ ಬರಲಿ ಎಂಬುದು ತಾಲ್ಲೂಕಿನ ಜನತೆಯ ಆಶಯವಾಗಿದೆ.

Recent Articles

spot_img

Related Stories

Share via
Copy link