ಮೈಸೂರು
ಮಂಡ್ಯದ ನಾಗಮಂಗಲದಲ್ಲಿ ನಡೆದ ಗಲಭೆ ಪೂರ್ವನಿಯೋಜಿತ. ಗಲಭೆಗೆ ಆರ್ಎಸ್ಎಸ್, ಬಿಜೆಪಿ, ಜೆಡಿಎಸ್ನವರು ಹುನ್ನಾರ ಮಾಡಿದ್ದರು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಗಂಭೀರ ಆರೋಪ ಮಾಡಿದ್ದಾರೆ. ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಆರ್ಎಸ್ಎಸ್, ಬಿಜೆಪಿ, ಜೆಡಿಎಸ್ ಸಂಚನ್ನು ವಿಫಲಗೊಳಿಸುವಲ್ಲಿ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿದೆ. ನಾಗಮಂಗಲ ಪಟ್ಟಣದಲ್ಲಿ ಗಲಭೆ ಮಾಡಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದ್ದಾರೆ ಎಂದರು.
ಮೊದಲು ಮೈಸೂರಿನಲ್ಲಿ ಕೋಮು ಗಲಭೆಗೆ ಸಂಚು ಹೂಡಿದ್ದರು. ಅಲ್ಲಿ ಅವರ ಪ್ಲ್ಯಾನ್ ವಿಫಲವಾಗಿದೆ. ನಾಗಮಂಗಲದಲ್ಲಿ ನಡೆದ ಕೃತ್ಯದಲ್ಲಿ ಶಾಮೀಲಾಗಿದ್ದು ಯುವಕರು. 20 ಜನ ಹಿಂದೂಗಳು, 30 ಜನ ಮುಸ್ಲಿಮರು ಭಾಗಿಯಾಗಿದ್ದಾರೆ. ಇದು ಆರ್ಎಸ್ಎಸ್, ಬಿಜೆಪಿ, ಜೆಡಿಎಸ್ ಪೂರ್ವ ನಿಯೋಜಿತ ಕೃತ್ಯ. ಈ ಕುರಿತು ಗೃಹ ಸಚಿವರು ದಾಖಲೆ ಬಿಡುಗಡೆ ಮಾಡಲಿದ್ದಾರೆ ಎಂದರು.
ನಾಗಮಂಗಲಕ್ಕೆ ಹೋಗಿ ಪ್ರಚೋದನಕಾರಿ ಹೇಳಿಕೆ ಕೊಟ್ಟಿದ್ದಾರೆ. ವಿಜಯೇಂದ್ರ, ಅಶೋಕ್ ಒಂದು ಸಮುದಾಯವನ್ನು ಬೈದಿದ್ದಾರೆ. ಇವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಎಂ.ಲಕ್ಷ್ಮಣ ಆಗ್ರಹಿಸಿದರು.