ನವದೆಹಲಿ
ರಾಜ್ಯ ಕಾಂಗ್ರೆಸ್ ನಾಯಕರು ರಾಜಧಾನಿ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.ಈಗಾಗಲೇ ಹಲವು ನಾಯಕರು ದೆಹಲಿಯ ಜಂತರ್ ಮಂತರ್ ನಲ್ಲಿರುವ ಪ್ರತಿಭಟನಾ ಸ್ಥಳದಲ್ಲಿ ಸೇರಿದ್ದಾರೆ. ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ನಾಯಕರು ‘ನಮ್ಮ ತೆರಿಗೆ ನಮ್ಮ ಹಕ್ಕು’ ಎಂಬ ಉದ್ಘೋಷದೊಂದಿಗೆ ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಇಂದು ಬುಧವಾರ ಪ್ರತಿಭಟನೆ ನಡೆಸಲಿದ್ದಾರೆ.
ಕೇವಲ ಅರ್ಧ ಗಂಟೆ ಅವಕಾಶ ನೀಡಿದ ದೆಲ್ಲಿ ಪೊಲೀಸರು:
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಸೇರಿದಂತೆ ಸಚಿವರು, ಶಾಸಕರು ಈಗಾಗಲೆ ದೆಹಲಿ ತಲುಪಿದ್ದು, ಇಂದು ಬೆಳಗ್ಗೆ 11 ಗಂಟೆಯಿಂದ ಜಂತರ್ ಮಂತರ್ನಲ್ಲಿ ಪ್ರತಿಭಟನೆ ಮಾಡಲಿದ್ದಾರೆ. ಆದರೆ, ದೆಹಲಿ ಪೊಲೀಸರು ಮಧ್ಯಾಹ್ನ 12.30ರಿಂದ 1ಗಂಟೆಯವರೆಗೆ ಮಾತ್ರ ಜಂತರ್ ಮಂತರ್ನಲ್ಲಿ ಪ್ರತಿಭಟನೆಗೆ ಅವಕಾಶ ನೀಡಿದ್ದಾರೆ.
ಕೇಂದ್ರ ಸರ್ಕಾರ ಅನುದಾನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ತಾರತಮ್ಯ ಮಾಡುತ್ತಿದೆ ಎಂದು ಅಂಕಿಅಂಶ ಸಹಿತ ಕೇಂದ್ರದ ವಿರುದ್ಧ ನಿನ್ನೆ ಸುದ್ದಿಗೋಷ್ಠಿಯಲ್ಲಿ ಆರೋಪ ಮಾಡಿದ್ದ ಸಿಎಂ ಸಿದ್ದರಾಮಯ್ಯ, ಇದು ದೆಹಲಿಯ ಚಲೋ ಪಕ್ಷದ ಪ್ರತಿಭಟನೆಯಲ್ಲ. ಸರ್ಕಾರದ ಪ್ರತಿಭಟನೆ, ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ಬಿಜೆಪಿ ಮತ್ತು ಜೆಡಿಎಸ್ ಸಂಸದರು ಪ್ರತಿಭಟನೆಗೆ ಬರಬೇಕು ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಸೇರಿದಂತೆ ವಿರೋಧ ಪಕ್ಷಗಳ ನಾಯಕರಿಗೆ ಆಹ್ವಾನ ನೀಡಿದ್ದಾರೆ.
ಕನ್ನಡ ಬಾವುಟದೊಂದಿಗೆ ಸಚಿವ ಪ್ರಿಯಾಂಕ್ ಖರ್ಗೆ ದೆಹಲಿಗೆ:
ಇಂದಿನ ಪ್ರತಿಭಟನೆಗೆ ಕನ್ನಡದ ಸ್ಪಷ್ಟ ನೀಡುವ ಉದ್ದೇಶದಿಂದ ಸಚಿವ ಪ್ರಿಯಾಂಕ್ ಖರ್ಗೆ ಕನ್ನಡ ಬಾವುಟಗಳನ್ನ ದೆಹಲಿಗೆ ತೆಗೆದುಕೊಂಡು ಹೋಗಿದ್ದಾರೆ. ಕನ್ನಡಿಗರ ಅಸ್ಮಿತೆ, ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ