ಧಾರವಾಡ : ನಾರಾಯಣ ಭರಮನಿ ವರ್ಗಾವಣೆ…..!

ಧಾರವಾಡ:

    ಕರ್ನಾಟಕ ಸರ್ಕಾರ ಹಲವು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ. ಧಾರವಾಡದ ಹೆಚ್ಚುವರಿ ಎಸ್ಪಿ ನಾರಾಯಣ ಭರಮನಿ ಸಹ ವರ್ಗಾವಣೆಗೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶಕ್ಕೆ ಕಾರಣವಾಗಿದ್ದ ನಾರಾಯಣ ಭರಮನಿ ಸ್ವಯಂ ನಿವೃತ್ತಿಗಾಗಿ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದರು.

   ವರ್ಗಾವಣೆ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಎಂ. ಧನಂಜಯ ಸರ್ಕಾರದ ಅಧೀನ ಕಾರ್ಯದರ್ಶಿ, ಒಳಡಾಳಿತ ಇಲಾಖೆ (ಪೊಲೀಸ್ ಸೇವೆಗಳು-ಎ) ಆದೇಶವನ್ನು ಹೊರಡಿಸಿದ್ದಾರೆ.ನಾರಾಯಣ ಭರಮನಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಧಾರವಾಡ ಜಿಲ್ಲೆ ತತ್‌ಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದ ತನಕ ಡಿಸಿಪಿ (ಕಾನೂನು ಸುವ್ಯಸ್ಥೆ) ಬೆಳಗಾವಿ ನಗರ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

   ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆ ಮೇಲೆಯೇ ನಾರಾಯಣ ಭರಮನಿ ಮೇಲೆ ಕೈ ಎತ್ತಿದ್ದು, ಭಾರೀ ಸುದ್ದಿಯಾಗಿತ್ತು. ಈ ಘಟನೆ ಬಳಿಕ ಮನನೊಂದಿದ್ದ ಭರಮನಿ ಸ್ವಯಂ ನಿವೃತ್ತಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು.

  31 ವರ್ಷಗಳ ಕಾಲ ನಾರಾಯಣ ಭರಮನಿ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದು, 4 ವರ್ಷಗಳ ಸೇವೆ ಬಾಕಿ ಇದೆ. ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಇತ್ತೀಚೆಗೆ ಪತ್ರವನ್ನು ಬರೆದಿದ್ದ ಅವರು ಮುಖ್ಯಮಂತ್ರಿಗಳ ಕಾರ್ಯಕ್ರಮದ ಘಟನೆ ನಂತರ ಮನನೊಂದಿದ್ದೇನೆ ಎಂದು ಉಲ್ಲೇಖಿಸಿದ್ದರು.

   ಬೆಳಗಾವಿ ಘಟನೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ. ಜಿ. ಪರಮೇಶ್ವರ ನಾರಾಯಣ ಭರಮನಿ ಮನವೊಲಿಕೆಗೆ ಪ್ರಯತ್ನ ಮಾಡಿದ್ದರು. ಈಗ ಅವರನ್ನು ಧಾರವಾಡದಿಂದ ಬೆಳಗಾವಿ ನಗರಕ್ಕೆ ವರ್ಗಾವಣೆಗೊಳಿಸಲಾಗಿದೆ.ಸ್ವಯಂ ನಿವೃತ್ತಿಗೆ ಪತ್ರ ಬರೆದಿದ್ದ ನಾರಾಯಣ ಭರಮನಿ ಜುಲೈ 8ರಿಂದ ಕರ್ತವ್ಯಕ್ಕೆ ಹಾಜರಾಗಿದ್ದರು. ಕರ್ನಾಟಕ ಸರ್ಕಾರ ಸಹ ಸ್ವಯಂ ನಿವೃತ್ತಿ ಮನವಿಯನ್ನು ಅಂಗೀಕಾರ ಮಾಡಿರಲಿಲ್ಲ.

   ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡುವಾಗ ಭದ್ರತಾ ವೈಫಲ್ಯ ಉಂಟಾಗಿತ್ತು. ಆಗ ವೇದಿಕೆ ಬಂದೋಬಸ್ತ್ ಉಸ್ತುವಾರಿಯಲ್ಲಿದ್ದ ನಾರಾಯಣ ಭರಮನಿಯನ್ನು ವೇದಿಕೆ ಮೇಲೆ ಕರೆದಿದ್ದ ಸಿದ್ದರಾಮಯ್ಯ ಅವರ ಮೇಲೆ ಕೈ ಎತ್ತಿದ್ದರು.

   ಈ ಘಟನೆ ಬಳಿಕ ವಿರೋಧ ಪಕ್ಷಗಳು ಸರ್ಕಾರವನ್ನು ಟೀಕಿಸಿದ್ದರು. ಮುಖ್ಯಮಂತ್ರಿಗಳು ಪೊಲೀಸ್ ಅಧಿಕಾರಿಗಳಿಗೆ ಹೇಗೆ ಗೌರವ ಕೊಡುತ್ತಾರೆ? ನೋಡಿ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದವು. ಈ ಘಟನೆಯ ಕೆಲವು ದಿನಗಳ ಬಳಿಕ ಭರಮನಿ ಸ್ವಯಂ ನಿವೃತ್ತಿಗಾಗಿ ಪತ್ರವನ್ನು ಬರೆದು ಮತ್ತೆ ಸುದ್ದಿಯಾಗಿದ್ದರು.

Recent Articles

spot_img

Related Stories

Share via
Copy link