ನರೇಗಾ : ದುಡಿಮೆಯ ದಿನ ಹೆಚ್ಚಿಸಲು ಕೇಂದ್ರ ಅನುಮತಿ ನೀಡುತ್ತಿಲ್ಲ : ಸಿಎಂ

ಹಾವೇರಿ:

    ‘ಬರಗಾಲ ಸಮಯದಲ್ಲಿ ನರೇಗಾ ಯೋಜನೆಯಡಿ 150 ದಿನಗಳವರೆಗೆ ಕೆಲಸ ಕೊಡಬೇಕೆನ್ನುವ ನಿಯಮ ಇದ್ದರೂ ದುಡಿಮೆಯ ದಿನ ಹೆಚ್ಚಿಸಲು ಅನುಮತಿ ನೀಡುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ವಾಗ್ದಾಳಿ ನಡೆಸಿದರು.

    ಕಾಗಿನೆಲೆ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ‌ಮಾತ್ರ ಅಲ್ಲ, ದೇಶದ 12 ರಾಜ್ಯಗಳಲ್ಲಿ ಬರಗಾಲ ಆವರಿಸಿದೆ. ಇಂತಹ ಸಂದರ್ಭದಲ್ಲಿ ದುಡಿಯುವ ಜನರಿಗೆ ಹೆಚ್ಚಿನ ದುಡಿಯುವ ಅವಕಾಶಗಳನ್ನು ನೀಡಬೇಕಾಗಿದೆ. ನರೇಗಾ ಯೋಜನೆಯಡಿ ಈಗ ನೀಡಲಾಗುತ್ತಿರುವ 100 ದಿನಗಳ ಉದ್ಯೋಗವನ್ನು 150 ದಿನಗಳಿಗೆ ಹೆಚ್ಚಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ಆದರೆ, ಕೇಂದ್ರ ಸರ್ಕಾರ ಇದುವರೆಗೆ ಅನುಮತಿ ನೀಡಿಲ್ಲ ಎಂದು ಹೇಳಿದರು.

    ಬರ ಪರಿಹಾರ ಕಾಮಗಾರಿಗಳನ್ನು ರಾಜ್ಯ ಸರ್ಕಾರ ಕೈಗೊಳ್ಳುತ್ತಿದೆ. ಆದರೆ, ಕೇಂದ್ರ ಸರ್ಕಾರ ತನ್ನ ಪಾಲಿನ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಇದುವರೆಗೆ ಒಂದು ಪೈಸೆಯೂ ಕೊಟ್ಟಿಲ್ಲ. ರಾಜ್ಯ ಕೊಟ್ಟಿರುವ ತೆರಿಗೆ ಹಣವನ್ನೂ ವಾಪಸ್ ನಮಗೆ ಕೊಡುತ್ತಿಲ್ಲ ಎಂದು ಕಿಡಿಕಾರಿದರು.

    ಬಳಿಕ ಕನಕಗುರುಪೀಠ ಆಯೋಜಿಸಿದ್ದ 536ನೇ ಕನಕ ಜಯಂತ್ಯೋತ್ಸವ ಹಾಗೂ ಭಾವೈಕ್ಯ ಸಮ್ಮೇಳನವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನಕಪೀಠ ಶೋಷಿತ ಸಮುದಾಯಗಳ ಪಾಲಿಗೆ ನೆಲೆಯಾಗಬೇಕು. ಎಲ್ಲಾ ಸಮುದಾಯಗಳಿಗೆ ಮುಕ್ತವಾಗಿಸುವುದು ಪೀಠವನ್ನು ಸ್ಥಾಪಿಸುವ ಮುಖ್ಯ ಉದ್ದೇಶವಾಗಿದ್ದು, ಇದು ಕುರುಬರಿಗೆ ಮಾತ್ರ ಸೀಮಿತವಾಗಿರಬಾರದು ಎಂದು ಎಂದು ಹೇಳಿದರು.
   ನಮ್ಮ ಇಚ್ಛೆ ಹಾಗೂ ಆಯ್ಕೆಗೆ ಅನುಗುಣವಾಗಿ ನಾವು ಭೂಮಿಗೆ ಬಂದಿಲ್ಲ. ಮನುಷ್ಯರು ಪರಸ್ಪರ ಗೌರವಿಸಬೇಕು, ಜಾತಿ ಮತ್ತು ಧರ್ಮದ ಆಧಾರದ ಮೇಲೆ ಮನುಷ್ಯರನ್ನು ಗೌರವಿಸುವುದನ್ನು ಕನಕದಾಸರು ವಿರೋಧಿಸಿದರ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ