ಏಪ್ರಿಲ್ 11ಕ್ಕೆ ಲೋಕಸಭಾ ಚುನಾವಣೆ : ಚುನಾವಣಾ ಆಯೋಗ

ನವದೆಹಲಿ

        ಎಲ್ಲ ರಾಜಕೀಯ ಪಕ್ಷಗಳು ಹಾಗೂ ದೇಶದ ಜನತೆ ಕುತೂಹಲದಿಂದ ನಿರೀಕ್ಷಿಸುತ್ತಿದ್ದ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದೆ. ಕರ್ನಾಟಕದಲ್ಲಿ ಏಪ್ರಿಲ್ 18 ಮತ್ತು 23 ರಂದು ಎರಡು ಹಂತದಲ್ಲಿ ತಲಾ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

        ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ದೆಹಲಿಯ ವಿಜ್ಞಾನ ಭವನದಲ್ಲಿ ಭಾನುವಾರ ಸಂಜೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದರು. ದೇಶಾದ್ಯಂತ ಏಪ್ರಿಲ್ 11 ರಿಂದ ಮೇ 19 ರವರೆಗೆ 7 ಹಂತಗಳಲ್ಲಿ ಚುನಾವಣೆ ನಡೆದು ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ. ಮೇ 27 ರ ಒಳಗಾಗಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

       ಏಪ್ರಿಲ್ 11, 18, 23, 29 ಮೇ 6, 12ರಂದು ಮತ್ತು ಮೇ 19ರಂದು ಕೊನೆಯ ಹಾಗೂ 7ನೇ ಹಂತದ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ 20 ರಾಜ್ಯಗಳ 91 ಕ್ಷೇತ್ರಗಳು, ಎರಡನೇ ಹಂತ 13 ರಾಜ್ಯಗಳ 97 ಕ್ಷೇತ್ರಗಳು, ಮೂರನೆ ಹಂತ 14 ರಾಜ್ಯಗಳ 115 ಕ್ಷೇತ್ರಗಳು, 4ನೇ ಹಂತ 9 ರಾಜ್ಯ 71ಕ್ಷೇತ್ರಗಳು, 5ನೇ ಹಂತ 7ರಾಜ್ಯಗಳ 51 ಕ್ಷೇತ್ರಗಳು, 6ನೇ ಹಂತ 7 ರಾಜ್ಯಗಳ 59ಕ್ಷೇತ್ರ, 7ನೇ ಹಂತದಲ್ಲಿ 8 ರಾಜ್ಯಗಳ 59 ಕ್ಷೇತ್ರಗಳಲ್ಲಿ ಮತದಾನವಾಗಲಿದೆ.

          ಆಂಧ್ರಪ್ರದೇಶ, ಗುಜರಾತ್, ತಮಿಳುನಾಡು, ಗೋವಾ ಮತ್ತು ಪಂಜಾಬ್ ಸೇರಿದಂತೆ 22 ರಾಜ್ಯಗಳಲ್ಲಿ ಒಂದೇ ಹಂತದ ಮತದಾನವಾಗಲಿದೆ. ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಹಾಗೂ ಪಿಡಿಪಿ ಸಮ್ಮಿಶ್ರ ಸರ್ಕಾರ ಮುರಿದು ಬಿದ್ದಿರುವ ಕಾರಣ ವಿಧಾನಸಭೆಗೆ ಚುನಾವಣೆ ನಡೆಸದೆ ನೇರವಾಗಿ ಲೋಕಸಭಾ ಚುನಾವಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಚುನಾವಣಾ ಆಯುಕ್ತರು ಮಾಹಿತಿ ನೀಡಿದ್ದಾರೆ.
ತಕ್ಷಣದಿಂದಲೇ ನೀತಿಸಂಹಿತೆ ಜಾರಿಯಾಗಿದೆ. ಚುನಾವಣಾ ಆಯೋಗದ ಸಹಾಯವಾಣಿ 1950 ತೆರೆಯಲಾಗಿದ್ದು, 24 ಗಂಟೆಯೂ ಕಾರ್ಯನಿರ್ವಹಿಸಲಿದೆ.

         ನೀತಿಸಂಹಿತೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಕ್ರಮಗಳ ವಿರುದ್ಧ ದೂರು ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು. ಮುಕ್ತ, ಪಾರದರ್ಶಕ ಚುನಾವಣೆ ನಡೆಸಲು ಸಿಆರ್ ಪಿಎಫ್ ಸೇರಿದಂತೆ ಕೇಂದ್ರ ಮತ್ತು ರಾಜ್ಯಗಳ ಭದ್ರತಾ ಪಡೆಯಗಳ ಸೇವೆಯನ್ನು ಬಳಸಲಾಗುವುದು ಎಂದ ಚುನಾವಣಾ ಆಯುಕ್ತರು, ದೇಶಾದ್ಯಂತ ಒಟ್ಟು 90 ಕೋಟಿ ಮತದಾರರು ಹಕ್ಕು ಚಲಾಯಿಸಲಿದ್ದಾರೆ. 18ರಿಂದ 19 ವರ್ಷ ವಯೋಮಿತಿಯ 1.5 ಕೋಟಿ ಮತದಾರರು ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ ಎಂದರು.

         ಕರ್ನಾಟಕದಲ್ಲಿ ಏಪ್ರಿಲ್ 18 ಹಾಗೂ ಏಪ್ರಿಲ್ 23 ರಂದು ಎರಡು ಹಂತಗಳಲ್ಲಿ ಮತದಾನವಾಗಲಿದೆ. ಮತಗಟ್ಟೆಗಳಲ್ಲಿ ಈ ಬಾರಿ ವಿದ್ಯುನ್ಮಾನ ಮತಯಂತ್ರದ ಜತೆಗೆ ವಿವಿ ಪ್ಯಾಟ್ ಮತ್ತು ಕಂಟ್ರೋಲ್ ಯೂನಿಟ್ ಗಳನ್ನು ಬಳಸಲಾಗುತ್ತಿದೆ. ಮಣಿಪುರ, ತ್ರಿಪುರಾ, ರಾಜಸ್ಥಾನಗಳಲ್ಲೂ ಎರಡು ಹಂತದಲ್ಲಿ ಮತದಾನ ನಡೆಯಲಿದೆ.

        ಸಾಮಾಜಿಕ ಮಾಧ್ಯಮಗಳು ಸಹ ಮಾಧ್ಯಮ ಸಮಿತಿಯ ಪರಿಶೀಲನೆಗೆ ಒಳಪಡಲಿದ್ದು, ಜಾಹೀರಾತುಗಳನ್ನು ನೀಡುವ ಮುನ್ನ ಮಾಧ್ಯಮ ಸಮಿತಿಯ ಅನುಮೋದನೆ ಪಡೆಯಬೇಕು. ಇದೇ ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ನೀಡುವ ಜಾಹೀರಾತುಗಳು ಸಹ ಅಭ್ಯರ್ಥಿಗಳ ಖರ್ಚು ವೆಚ್ಚಕ್ಕೆ ಸೇರಲಿದೆ ಎಂದು ಸುನೀಲ್ ಅರೋರ ತಿಳಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link