ಅಮರಾವತಿ
ಲೋಕಸಭೆ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಮತಬೇಟೆಗೆ ಇಳಿದಿವೆ ಇದಕ್ಕೆ ನಾವೇನು ಕಡಿಮೆ ಇಲ್ಲ ಎಂಬಂತೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಮಹಿಳಾ ಸ್ವಸಹಾಯ ಸಂಘದ ಸದಸ್ಯೆಯರಿಗೆ 10,000 ರೂಪಾಯಿ ಮತ್ತು ಒಂದೊಂದು ಸ್ಮಾರ್ಟ್‌ಫೋನ್ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಯೋಜನೆಗೆ ಅವರು ಇಟ್ಟಿರುವ ಹೆಸರು ‘ಪಸುಪು-ಕುಂಕುಮ್’ ಈ ಯೋಜನೆಯಲ್ಲಿ ಮೂರು ಕಂತುಗಳಲ್ಲಿ ಮಹಿಳೆಯರಿಗೆ ಚೆಕ್ ವಿತರಿಸುವುದಾಗಿ ಹೇಳಿದ್ದಾರೆ.
ಫೆಬ್ರವರಿ ಮೊದಲ ವಾರ 2500 ರು. ಚೆಕ್, ಫೆಬ್ರವರಿ ಕೊನೆಯಲ್ಲಿ 3000 ರು. ಚೆಕ್ ಹಾಗೂ ಏಪ್ರಿಲ್‌ನಲ್ಲಿ ಕೊನೆಯ ಕಂತಿನ ಹಣ ನೀಡಲಾಗುವುದು ಎಂದು ನಾಯ್ಡು ಶುಕ್ರವಾರ ನಡೆದ ಮಹಿಳಾ ಸ್ವಸಹಾಯ ಸಂಘಗಳ ಸಮಾವೇಶದಲ್ಲಿ ಪ್ರಕಟಿಸಿದರು. ಏಪ್ರಿಲ್‌ನಲ್ಲೇ ಲೋಕಸಭೆಗೆ ಚುನಾವಣೆ ನಡೆಯುವ ಸಾಧ್ಯತೆಯಿದೆ. ಆಂಧ್ರದ ಸ್ವಸಹಾಯ ಸಂಘಗಳಲ್ಲಿ 93 ಲಕ್ಷ ಮಹಿಳೆಯರು ಸದಸ್ಯರಾಗಿದ್ದು, ಅವರಿಗೆಲ್ಲ ಹಣ ಹಾಗೂ ಫೋನ್ ನೀಡಲು 9400 ಕೋಟಿ ರು. ಖರ್ಚಾಗಲಿದೆ.
2014ರ ನಂತರ ಇಲ್ಲಿಯವರೆಗೆ ನಾಯ್ಡು ಈ ಸಂಘಗಳಿಗಾಗಿ 21,116 ಕೋಟಿ ರು. ಮೊತ್ತದ ಕೊಡುಗೆಗಳನ್ನು ನೀಡಿದ್ದಾರೆ. ಇದು ‘ವೋಟಿಗಾಗಿ ನೋಟು’ ಯೋಜನೆ ಎಂದು ಪ್ರತಿಪಕ್ಷ ವೈಎಸ್‌ಆರ್ ಕಾಂಗ್ರೆಸ್ ಟೀಕಿಸಿದೆ. ಆದರೆ, ‘ನನ್ನ ಅಕ್ಕತಂಗಿಯರು ಆತ್ಮಗೌರವದಿಂದ ಬಾಳಲು ಸರ್ಕಾರ ದಿಂದ ನೀಡುತ್ತಿರುವ ಕೊಡುಗೆಯಿದು. ಸರ್ಕಾರದಲ್ಲಿ ಹಣವಿಲ್ಲದಿದ್ದರೂ ಸಾಲ ಮಾಡಿ ಇದನ್ನು ನೀಡುತ್ತಿದ್ದೇವೆ’ ಎಂದು ನಾಯ್ಡು ಸಮರ್ಥಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ