ನವದೆಹಲಿ:
ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ವಿವಿಪ್ಯಾಟ್ ಎಣಿಕೆ ಕುರಿತ ಚುನವಣಾ ಆಯೋಗದ ಅಫಿಡವಿಟ್ ಗೆ ಒಂದು ವಾರದಲ್ಲಿ ಪ್ರತಿಕ್ರಿಯೆ ನೀಡಿ ಎಂದು ಮಹಾಘಟಬಂಧನದ ನಾಯಕರಿಗೆ ಸುಪ್ರೀಂ ಕೋರ್ಟ್ ತಿಳಿಸಿದೆ.
ಚಂದ್ರಬಾಬು ನಾಯ್ಡು ನೇತೃತ್ವ್ವದ ಪ್ರತಿಪಕ್ಷಗಳ ಮೈತ್ರಿಕೂಟ ಮುಂಬರುವ ಲೋಕಸಭೆ ಚುನಾವಣೆಯ ಮತಎಣಿಕೆ ವೇಳೆ ಪ್ರತಿ ಅಸೆಂಬ್ಲಿ ಕ್ಷೇತ್ರದ ಕನಿಷ್ಠ 50 ಪ್ರತಿಶತದಷ್ಟು ವಿವಿಪ್ಯಾಟ್ ಗಳನ್ನು ಎಣಿಕೆ ಮಾಡಬೇಕು ಎಂದು ಕೋರ್ಟ್ ಗೆ ಮನವಿ ಸಲ್ಲಿಸಿತ್ತು.
ಈ ಅರ್ಜಿಯ ವಿಚಾರಣೆ ಮಾಡಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ನ್ಯಾಯಪೀಠವು ಮುಂದಿನ ಸೋಮವಾರದೊಳಗೆ ಆಯೋಗ ಸಲ್ಲಿಸಿರುವ ಅಫಿಡವಿಟ್ ಗೆ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಪ್ರತಿಪಕ್ಷ ನಾಯಕರ ಪರ ವಕೀಲ ಎ. ಎಂ. ಸಿಂಘ್ವಿ ಅವರಿಗೆ ಆದೇಶಿಸಿದೆ.
ಅಫಿಡವಿಟ್ ಸಲ್ಲಿಸಿದ್ದ ಚುನಾವಣಾ ಆಯೋಗ ಪ್ರತಿಪಕ್ಷ ನಾಯಕರ ಮನವಿಯನ್ನು ವಜಾ ಮಾಡಲು ನ್ಯಾಯಾಲಯವನ್ನು ಕೋರಿತ್ತು. ಪ್ರತಿವಾದಿಗಳು ವಿವಿಪ್ಯಾಟ್ ಎಣಿಕೆ ಹೆಚ್ಚಳ ಮಾಡಲು ಕೇಳುತ್ತಿದ್ದಾರೆ. ಆದರೆ ಪ್ರತಿ ಮತಗಟ್ಟೆಯ ಶೇ. 50ರಷ್ಟು ವಿವಿಪ್ಯಾಟ್ ಎಣಿಕೆ ಮಾಡಬೇಕಾದರೆ ಅದಕ್ಕೆ ಆರು ವಾರಗಳ ಕಾಲಾವಧಿ ಹಿಡಿಯಲಿದೆ. ಅಲ್ಲದೆ ಪ್ರತಿವಾದಿಗಳು ವಿವಿಪ್ಯಾಟ್ ಎಣಿಕೆ ಬಗ್ಗೆ ಕೇಳುತ್ತಿದ್ದು ಇದಕ್ಕೆ ಅವರು ಯಾವುದೇ ಬಲವಾದ ಕಾರಣ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಆಯೋಗ ತನ್ನ ಅಫಿಡವಿಟ್ ನಲ್ಲಿ ತಿಳಿಸಿದೆ.
ಸಾಕಷ್ಟು ಪರೀಕ್ಷೆಗಳ ನಂತರ ಈ ವ್ಯವಸ್ಥೆ ಜಾರಿಗೆ ಬಂದಿದ್ದು ಇವಿಎಂ ಮೂಲಕ ಮತದಾನ, ವಿವಿಪ್ಯಾಟ್ ಬಳಕೆ ಅತ್ಯಂತ ಸೂಕ್ತ ಕ್ರಮವಾಗಿದೆ, ಇದರಲ್ಲಿ ಯಾವ ವಂಚನೆ ನಡೆಯುವುದಿಲ್ಲ ಎಂದು ಆಯೋಗವು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








