ನವದೆಹಲಿ:
ಪ್ರಾಥಮಿಕ ಮತ್ತು ಮಾಧ್ಯಮಿಕ ಹಂತದ ತರಗತಿಗಳಿಗೆ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಗುರುವಾರ ಬಿಡುಗಡೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಕ್ಯಾಲೆಂಡರ್ ವಿದ್ಯಾರ್ಥಿಗಳಿಗೆ ಮನರಂಜನೆಭರಿತ ಆಸಕ್ತಿದಾಯಕ ಆನ್ ಲೈನ್ ಕಲಿಕೆಗೆ ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳನ್ನು ಹೇಗೆ ಬಳಸಬೇಕು ಎಂಬುದರ ಬಗ್ಗೆ ಮಾರ್ಗಸೂಚಿ ನೀಡಲಿದೆ. ಅನೇಕರ ಬಳಿ ಅಂತರ್ಜಾಲ ಸೌಲಭ್ಯ ಇಲ್ಲದಿರಬಹುದು ಅಥವಾ ಸಾಮಾಜಿಕ ತಾಣ ಸಾಧನಗಳ ಬಳಕೆ ತಿಳಿದಿಲ್ಲದಿರಬಹುದು. ಪ್ರಾಥಮಿಕ ಹಂತದ ವಿದ್ಯಾರ್ಥಿಗಳು ಹೊಸ ಕ್ಯಾಲೆಂಡರ್ ಗೆ ಹೊಂದಿಕೊಳ್ಳಲು ಪೋಷಕರು ತಿಳಿಸಿಕೊಡಬೇಕು ಎಂದು ವಿವರಿಸಿದರು.
ಕೊರೋನಾ ಕಾರಣದಿಂದ ಮನೆಯಲ್ಲೇ ಇರುವ ವಿದ್ಯಾರ್ಥಿಗಳು ಸಮಯ ಸದುಪಯೋಗಪಡಿಸಿಕೊಳ್ಳಲು ಈ ಪರ್ಯಾಯ ವೇಳಾಪಟ್ಟಿಯನ್ನು ಮಾನವ ಸಂಪನ್ಮೂಲ ಸಚಿವಾಲಯದ ಮಾರ್ಗಸೂಚಿ ಅನ್ವಯ ಎನ್ ಸಿ ಇ ಆರ್ ಟಿ ಸಿದ್ಧಪಡಿಸಿದೆ. ಈ ಕ್ಯಾಲೆಂಡರ್ ನಲ್ಲಿ ವಾರ ಆಧಾರಿತವಾಗಿ ಆಸಕ್ತಿದಾಯಕ ಚಟುವಟಿಕೆ, ಸಂಬಂಧಪಟ್ಟ ಪಠ್ಯ ಮೊದಲಾದ ಮಾಹಿತಿ ಇದ್ದು ಇದು ಕಲಿಕಾ ಜ್ಞಾನದ ಪ್ರದರ್ಶನಕ್ಕೆ ಸಹಕಾರಿಯಾಗಿದೆ.
ಪ್ರವಾಸೋದ್ಯಮ ಸಚಿವಾಲಯ ಸಹ “ದೇಖೋ ಅಪ್ನಾ ದೇಶ್” ಸರಣಿ ವೆಬ್ ಕಾರ್ಯಕ್ರಮ ರೂಪಿಸಿದೆ. ಇದು ದೇಶದ ವಿವಿಧ ಪ್ರವಾಸಿ ತಾಣಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಹೆಚ್ಚು ಜನಪ್ರಿಯವಲ್ಲದ ಪ್ರದೇಶಗಳ ಬಗೆಗೂ ಈ ಕಾರ್ಯಕ್ರಮ ಸಾಕಷ್ಟು ಮಾಹಿತಿ ನೀಡಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ