ಶಿಮ್ಲಾ
ಲೋಕಸಭಾ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಹಿಮಾಚಲ ಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷ ಸತ್ ಪಾಲ್ ಸಿಂಗ್ ಸತಿ ಅವರಿಗೆ 48 ಗಂಟೆಗಳ ಕಾಲ ಯಾವುದೇ ಪ್ರಚಾರದಲ್ಲಿ ತೊಡಗದಂತೆ ಕೇಂದ್ರ ಚುನಾವಣಾ ಆಯೋಗ ನಿರ್ಬಂಧ ಹೇರಿದೆ.
ಇಲ್ಲಿನ ಸೋಲನ್ ಜಿಲ್ಲೆಯ ರಾಮ್ ಶೇರ್ ಬಳಿಯ ಹಳ್ಳಿಯೊಂದರಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಅವರು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಅವರ ತಾಯಿ ಹಾಗೂ ಸಂಬಂಧಿಯ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. ಇದನ್ನು ವಿರೋಧಿಸಿ ಕಾಂಗ್ರೆಸ್ ಚುನಾವಣಾ ಆಯೋಗ ಹಾಗೂ ರಾಜ್ಯ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ ಚುನಾವಣಾ ಆಯೋಗ ಸತಿ ಅವರಿಗೆ ಮುಂದಿನ 48 ಗಂಟೆಗಳ ಕಾಲ ಪ್ರಚಾರದಲ್ಲಿ ತೊಡಗದಂತೆ ನಿರ್ಬಂಧ ವಿಧಿಸಿದೆ. ಈ ವಿಷಯವನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ದೇವೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಚುನಾವಣಾ ಆಯೋಗದ ವರದಿಯಲ್ಲಿ, ಸತ್ ಪಾಲ್ ಸಿಂಗ್ ಅವರಿಗೆ ಸಂವಿಧಾನದ 324ರ ಪರಿಚ್ಛೇದದ ಅಡಿಯಲ್ಲಿ ಏ.20ರ ಬೆಳಗ್ಗೆ 10ರವರೆಗೆ ಯಾವುದೇ ಸಾರ್ವಜನಿಕ ಸಭೆ, ಸಾರ್ವಜನಿಕ ಜಾಥಾ, ರೋಡ್ ಶೋ ಹಾಗೂ ಸಂದರ್ಶನಗಳಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಉಲ್ಲೇಖಿಸಲಾಗಿದೆ. ಸತ್ ಪಾಲ್ ಸಿಂಗ್ ವಿರುದ್ಧ ಈಗಾಗಲೇ ಎರಡು ಪ್ರಕರಣಗಳಲ್ಲಿ ನೋಟಿಸ್ ಜಾರಿ ಮಾಡಲಾಗಿದ್ದು, ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಬಂಧ ಹೇರಲಾಗಿದೆ.