ನಾಗ್ಪುರ:
ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಪೊಲೀಸರು ಮತ್ತು ನಕ್ಸಲೀಯರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ ಐದು ಮಂದಿ ನಕ್ಸಲರು ಮೃತಪಟ್ಟಿದ್ದಾರೆ.ನಿನ್ನೆ ಅಪರಾಹ್ನ 4 ಗಂಟೆ ಹೊತ್ತಿಗೆ ಕೊಸ್ಮಿ-ಕಿಸ್ನೆಲಿ ಅರಣ್ಯ ಪ್ರದೇಶದಲ್ಲಿ ನಕ್ಸಲರು ಮತ್ತು ಪೊಲೀಸರ ಮಧ್ಯೆ ಗುಂಡಿನ ಚಕಮಕಿ ನಡೆದಿದೆ ಎಂದು ಗಡ್ಚಿರೊಲಿ ಎಸ್ಪಿ ತಿಳಿಸಿದ್ದಾರೆ.
ಗಡ್ಚಿರೊಲಿ ಪೊಲೀಸರ ಸಿ-60 ಕಮಾಂಡೊಗಳು ನಿನ್ನೆ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ನಕ್ಸಲರು ಗುಂಡಿನ ಮಳೆಗೈಯಲು ಆರಂಭಿಸಿದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಪ್ರತಿದಾಳಿ ನಡೆಸಿ ಸಮರ್ಥವಾಗಿ ನಕ್ಸಲರನ್ನು ಹಿಮ್ಮೆಟ್ಟಿದ್ದರಿಂದ ನಕ್ಸಲೀಯರು ಅಲ್ಲಿಂದ ಕಾಲ್ಕಿತ್ತರು ಎಂದು ಪೊಲೀಸರು ತಿಳಿಸಿದ್ದಾರೆ.ನಂತರ ಶೋಧ ಕಾರ್ಯದ ವೇಳೆ ಐವರು ನಕ್ಸಲರ ಮೃತದೇಹ ಸಿಕ್ಕಿತು. ಅವರ ಗುರುತು ಇನ್ನೂ ಪತ್ತೆಯಾಗಿಲ್ಲ.
