ನವದೆಹಲಿ:
ಸುಪ್ರೀಂ ಕೋರ್ಟ್ ಕೊಲಿಜಿಯಂಗೆ 13 ವರ್ಷ ನಂತರ ಮಹಿಳಾ ನ್ಯಾಯಮೂರ್ತಿಯೊಬ್ಬರು ಕೊಲಿಜಿಯಂನಲ್ಲಿ ಸ್ಥಾನ ಪಡೆದಿದ್ದಾರೆ. ಸೀನಿಯಾರಿಟಿ ಆಧಾರದ ಮೇಲೆ ಕೊಲಿಜಿಯಂಗೆ ನ್ಯಾ.ಭಾನುಮತಿಯವರನ್ನು ನೇಮಕ ಮಾಡಲಾಗಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಹಾಲಿ ನ್ಯಾಯಮೂರ್ತಿಗಳ ಪೈಕಿ 5ನೇಯವರಾಗಿರುವ ನ್ಯಾ.ಭಾನುಮತಿ ಅವರು ಸಿಜೆಐ ಗೊಗೊಯ್ ಅವರ ನಿವೃತ್ತಿ ನಂತರ ಕೊಲಿಜಿಯಂಗೆ ನೇಮಕಗೊಂಡಿದ್ದು. ಅವರ ಸೇವಾವಧಿ 2020ರ ಜುಲೈ 19ರವರೆಗೆ ಇರಲಿದೆ . ಸಿಜೆಐ ಎಸ್. ಎ ಬೊಬ್ಡೆ, ನ್ಯಾಯಮೂರ್ತಿ ಗಳಾದ ಎನ್. ವಿ ರಮಣ, ಅರುಣ್ ಮಿಶ್ರಾ, ಆರ್.ಎಫ್. ನಾರಿಮನ್ ಮತ್ತು ಆರ್. ಭಾನುಮತಿ ಅವರು ಹಾಲಿ ಕೊಲಿಜಿಯಂ ಸದಸ್ಯರು.
ನ್ಯಾ.ಭಾನುಮತಿ ಅವರು ತಮಿಳುನಾಡಿನ ತಿರುಪತ್ತೂರು, ಕೃಷ್ಣಗಿರಿ ಕೋರ್ಟ್‌ಗಳಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದರು. 1988ರಲ್ಲಿನೇರ ನೇಮಕಾತಿ ಮೂಲಕ ಜಿಲ್ಲಾನ್ಯಾಯಾಧೀಶರಾಗಿ ನೇಮಕಗೊಂಡು ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿಸೇವೆ ಸಲ್ಲಿಸಿದ್ದಾರೆ. 2003ರ ಏ. 3ರಂದು ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದ ಅವರು, 2013ರ ನ.16ರಂದು ಜಾರ್ಖಂಡ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು
2014ರ ಆ.13ರಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿದ್ದಾರೆ. ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳಿಗೆ ಮರಣದಂಡನೆ ಶಿಕ್ಷೆಯನ್ನು ನೀಡಿದ ತ್ರಿಸದಸ್ಯ ಪೀಠದ ನ್ಯಾಯಮೂರ್ತಿಗಳಲ್ಲಿ ಿವರು ಕೂಡ ಒಬ್ಬರು.
ಮಧ್ಯಪ್ರದೇಶ ಹೈಕೋರ್ಟ್‌ನ ಜಡ್ಜ್ ಎಸ್.ಕೆ. ಗಂಗಲೆ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ತನಿಖೆ ನಡೆಸಲು ಅಂದಿನ ರಾಜ್ಯಸಭೆ ಸಭಾಪತಿ ಹಮೀದ್ ಅನ್ಸಾರಿ ರಚಿಸಿದ ವಿಚಾರಣಾ ಸಮಿತಿ ಮುಂದಾಳತ್ವವನ್ನು ಭಾನುಮತಿ ವಹಿಸಿದ್ದರು.ಸಮಿತಿಯು ಗಂಗಲೆ ಅವರಿಗೆ ಕ್ಲೀನ್‌ಚಿಟ್ ನೀಡಿದೆ. ಕೊಲೆಜಿಯಂನ ಕೊನೆಯ ಮಹಿಳಾ ನ್ಯಾಯಮೂರ್ತಿಯಾಗಿದ್ದವರು ನ್ಯಾ. ರುಮಾ ಪಾಲ್. ಅವರು ಜೂ 2, 2006 ರಂದು ನಿವೃತ್ತರಾದ 14 ವರ್ಷಗಳ ನಂತರ ನ್ಯಾ. ಭಾನುಮತಿ ಕೊಲಿಜಿಯಂನಲ್ಲಿ ಸ್ಥಾನ ಪಡೆದಿದ್ದಾರೆ.