ತಮಿಳುನಾಡು:
ಪಾಕ್ ಕುತಂತ್ರಕ್ಕೆ ತಕ್ಕ ಪ್ರತ್ಯುತ್ತರ ನೀಡಿದ ಭಾರತ ಇಂದು ಜಾಗತಿಕ ಮಟ್ಟದಲ್ಲಿ ಉಗ್ರರನ್ನು ಮಟ್ಟಹಾಕಲು ಮುಂದಾಗಿರುವುದು ಗರ್ವಕಾರಣವಾಗಿದೆ ಮತ್ತು ನಾವು ಶಾಂತಿಗೆ ಬದ್ಧವಾಗಿದ್ದೇ ಆದರೆ ಅನೀವಾರ್ಯ ಸಂದರ್ಭ ಎದುರಾದರೆ ಎಲ್ಲಾ ಶಕ್ತಿ ಬಳಸಿ ರಾಷ್ಟ್ರವನ್ನು ರಕ್ಷಿಸಲೂ ಸಮರ್ಥರಾಗಿದ್ದೇವೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.
ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಕೋಟ್ ನಲ್ಲಿ ಜೈಷ್ – ಇ- ಮೊಹಮ್ಮದ್ ಉಗ್ರ ಶಿಬಿರಗಳ ಮೇಲೆ ನಡೆಸಿದ ವಾಯುದಾಳಿ ದೇಶದ ಶೌರ್ಯವನ್ನು ಪ್ರದರ್ಶಿಸಿದೆ ಎಂದಿದ್ದಾರೆ.ಸುಲೂರು ವಾಯುನೆಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತ ಶಾಂತಿಗೆ ಬದ್ಧವಿರುವ ರಾಷ್ಟ್ರವಾಗಿದೆ.ಆದರೆ, ಅನೀವಾರ್ಯವಾದರೆ ರಾಷ್ಟ್ರ ರಕ್ಷಣೆಗಾಗಿ ಎಲ್ಲಾ ಶಕ್ತಿಯನ್ನು ಬಳಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಭಾರತೀಯ ಸೇನೆ ವೃತ್ತಿಪರ ಹಾಗೂ ಪರಿಣಿತ ಸಿಬ್ಬಂದಿಯಿಂದ ಕೂಡಿದ್ದು, ಆಧುನಿಕ ತಾಂತ್ರಿಕವಾಗಿ ಪ್ರಗತಿಹೊಂದಿದೆ .ವಾಯುಪಡೆಯನ್ನು ನಿರಂತರವಾಗಿ ಆಧುನಿಕ ರೀತಿಯಲ್ಲಿ ಸಜ್ಜುಗೊಳಿಸಲಾಗುತ್ತಿದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಯುದ್ಧ ಹಾಗೂ ಶಾಂತಿಯ ಸಂದರ್ಭದಲ್ಲಿ ರಾಷ್ಟ್ರಕ್ಕಾಗಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ವಾಯುಪಡೆ ಹಾಗೂ ಪೈಲಟ್ ಗಳಿಗೆ ಅತ್ಯುನ್ನತ ಗೌರವ ನೀಡಿ ರಾಮನಾಥ್ ಕೋವಿಂದ್ ಸನ್ಮಾನಿಸಿದರು.