ನವದೆಹಲಿ:
ಪ್ರಮುಖ ಬೆಳವಣಿಗೆಯಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರ ನಿಯಂತ್ರಣದ ಹೊಣೆಯನ್ನು ಭಾರತದ ಜೇಮ್ಸ್ ಬಾಂಡ್ ಎಂದೇ ಖ್ಯಾತರಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರ ಹೆಗಲಿಗೆ ಹಾಕಲಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತಂತೆ ಸುದ್ದಿಸಂಸ್ಥೆಯೊಂದು ವರದಿ ಮಾಡಿದ್ದು, ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ಸಿಎಎ ಪರ-ವಿರೋಧಿ ಗಲಭೆಯನ್ನು ನಿಯಂತ್ರಿಸುವ ಹೊಣೆಯನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರಿಗೆ ನೀಡಲಾಗಿದೆ. ಇದೇ ಕಾರಣಕ್ಕಾಗಿ ದೆಹಲಿಯಲ್ಲಿ ಭದ್ರತಾ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸಂಪುಟ ಸಭೆ ಕರೆಯಲಾಗಿದ್ದು, ಸಭೆಗೆ ಅಜಿತ್ ಧೋವಲ್ ಅವರೂ ಕೂಡ ಹಾಜರಾಗಲಿದ್ದಾರೆ.
ಅಂತೆಯೇ ಇದೇ ವೇಳೆ ದೆಹಲಿ ಪೊಲೀಸ್ ವರಿಷ್ಢಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದ ಧೋವಲ್, ಹಿಂಸಾಚಾರ ನಿಯಂತ್ರಣಕ್ಕೆ ಬೇಕಾದ ಯಾವುದೇ ಕಠಿಣ ನಿರ್ಧಾರಗಳನ್ನು ಕೈಗೊಳ್ಳಿ. ಕಾನುನು ಮತ್ತು ಸುವ್ಯವಸ್ಥೆಯ ರಕ್ಷಣೆ ಮುಖ್ಯ. ಯಾವುದೇ ಕಾರಣಕ್ಕೂ ದೆಹಲಿ ಸಹಜ ಸ್ಥಿತಿಗೆ ಮರಳಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಕಠಿಣ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಪೊಲೀಸರ ನೆರವಿಗೆ ಅಗತ್ಯಬಿದ್ದರೆ ಪ್ಯಾರಾಮಿಲಿಟರಿ ಪಡೆಗಳನ್ನೂ ಕೂಡ ಕರೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಭಾನುವಾರದಿಂದ ನಡೆಯುತ್ತಿರುವ ಹಿಂಸಾಚಾರದಲ್ಲಿ ಈ ವರೆಗೂ ಕನಿಷ್ಠ 20 ಮಂದಿ ಬಲಿಯಾಗಿದ್ದು, 190ಕ್ಕೂ ಅಧಿಕ ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಲ್ಲದೆ ನೂರಾರು ಕೋಟಿ ರೂ ಮೌಲ್ಯದ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟವಾಗಿದ್ದು, ವಾಹನಗಳು, ಮನೆ, ಅಂಗಡಿಗಳಿಗೆ ಉದ್ರಿಕ್ತರು ಬೆಂಕಿ ಹಚ್ಚಿ ನಾಶ ಮಾಡಿದ್ದಾರೆ.