ಬೆಂಗಳೂರು
ಆಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಇಡಿ ಬಂಧನಕ್ಕೊಳಗಾಗಿ ಜೈಲಿನಲ್ಲಿದ್ದ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದ್ದು ಆ ಮೂಲಕ ಸತತ 50 ದಿನಗಳ ಜೈಲು ವಾಸದಿಂದ ಅವರಿಗೆ ಮುಕ್ತಿ ಸಿಕ್ಕಂತಾಗಿದೆ.
ಆರ್ಥಿಕ ಜಾರಿ ನಿರ್ದೇಶನಾಲಯ ಹಾಗೂ ಡಿಕೆಶಿ ಪರ ವಕೀಲರ ವಾದ-ಪ್ರತಿವಾದದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ತೀರ್ಪು ನೀಡಿದ ದೆಹಲಿ ಹೈಕೋರ್ಟ್ ಡಿಕೆಶಿಗೆ ಜಾಮೀನು ಮಂಜೂರು ಮಾಡಿ ಆದೇಶಿಸಿತು.ಜಾಮೀನು ನೀಡಿದ ಹಿನ್ನೆಲೆಯಲ್ಲಿ ಇಪ್ಪತ್ತೈದು ಲಕ್ಷ ರೂಗಳ ಭದ್ರತೆ ನೀಡಬೇಕು.ವಿದೇಶಗಳಿಗೆ ಹೋಗುವ ಮುನ್ನ ನ್ಯಾಯಾಲಯದ ಅನುಮತಿ ಪಡೆಯಬೇಕು.ಪಾಸ್‍ಪೋರ್ಟ್ ಅನ್ನು ಸರೆಂಡರ್ ಮಾಡಬೇಕು ಮತ್ತು ಆರ್ಥಿಕ ಜಾರಿ ನಿರ್ದೇಶನಾಲಯ ಕರೆದಾಗ ವಿಚಾರಣೆಗೆ ಹಾಜರಾಗಬೇಕು ಎಂದು ಹೈಕೋರ್ಟ್ ಷರತ್ತು ವಿಧಿಸಿತು.
ಡಿಕೆಶಿ ಆರೋಗ್ಯ ಹದಗೆಟ್ಟಿದೆ ಹಾಗೂ ಅವರು ದೇಶ ಬಿಟ್ಟು ಪಲಾಯನ ಮಾಡುವ ಸಾಧ್ಯತೆಯಿಲ್ಲ.ಹೀಗಾಗಿ ವಿಚಾರಣೆಗಾಗಿ ಅವರನ್ನು ವಶಕ್ಕೆ ಪಡೆಯುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿತು.ಡಿಕೆಶಿ ಬಂಧಮುಕ್ತರಾದ ಬೆನ್ನಲ್ಲೇ ರಾಜ್ಯದಲ್ಲಿರುವ ಅವರ ಬೆಂಬಲಿಗರ ಪಡೆ ವಿಜಯೋತ್ಸವ ಆಚರಿಸಿತಲ್ಲದೆ ಅವರ ಪತ್ನಿ,ಪುತ್ರಿ ಸೇರಿದಂತೆ ಕುಟುಂಬದ ಸದಸ್ಯರು ಕನಕಪುರಕ್ಕೆ ಧಾವಿಸಿ ದೇವರಿಗೆ ವಿಶೇಷಪೂಜೆ ಸಲ್ಲಿಸಿದರು.
ಡಿಕೆಶಿಗೆ ಜಾಮೀನು ನೀಡಿ ದೆಹಲಿ ಹೈಕೋರ್ಟ್ ಆದೇಶ ಹೊರಡಿಸುತ್ತಿದ್ದಂತೆಯೇ ಹರ್ಷಚಿತ್ತರದ ಅವರ ಸಹೋದರ,ಸಂಸದ ಡಿ.ಕೆ.ಸುರೇಶ್ ಅವರು ನ್ಯಾಯಾಲಯದ ಆವರಣದಲ್ಲಿ ವಕೀಲರನ್ನು ತಬ್ಬಿಕೊಂಡು ಹರ್ಷ ವ್ಯಕ್ತಪಡಿಸಿದರು.ಕಳೆದ ತಿಂಗಳ ಆರಂಭದಲ್ಲಿ ಇಡಿ ವಿಚಾರಣೆಯ ಸಲುವಾಗಿ ದೆಹಲಿಗೆ ಹೋದ ಡಿಕೆಶಿ ಅವರನ್ನು ಬಂಧಿಸಲಾಗಿತ್ತಲ್ಲದೆ ಹತ್ತು ದಿನಗಳ ಕಾಲ ಸೆಲ್‍ನಲ್ಲಿಟ್ಟು ಸತತವಾಗಿ ವಿಚಾರಣೆ ನಡೆಸಲಾಗಿತ್ತು.
ತದನಂತರ ಅವರನ್ನು ತಿಹಾರ್ ಜೈಲಿಗೆ ಕಳಿಸಲಾಗಿತ್ತಲ್ಲದೆ ನಿರಂತರವಾಗಿ ಅವರನ್ನು ವಿಚಾರಣೆಗೆ ಒಳಪಡಿಸುತ್ತಲೇ ಬರಲಾಗಿತ್ತು.ಇದೇ ಕಾರಣಕ್ಕಾಗಿ ಹೈಕೋರ್ಟ್ ಕೂಡಾ ಡಿಕೆಶಿ ಪರ ವಕೀಲರು ಸಲ್ಲಿಸುತ್ತಿದ್ದ ಜಾಮೀನು ಅರ್ಜಿಯನ್ನು ವಜಾ ಮಾಡುತ್ತಲೇ ಬಂದಿತ್ತು.
ಈ ಮಧ್ಯೆ ಸಕ್ಕರೆ ಕಾಯಿಲೆ,ರಕ್ತದೊತ್ತಡ,ಥೈರಾಯಿಡ್ ಸಮಸ್ಯೆಯಿಂದ ಬಳಲತೊಡಗಿದ ಡಿಕೆಶಿ ಅವರನ್ನು ಬಂಧಮುಕ್ತಗೊಳಿ ಸುವಂತೆ ಕೋರುತ್ತಿದ್ದ ವಕೀಲರು ತಮ್ಮ ಪರ ಅರ್ಜಿದಾರರು ಯಾವ ಸಾಕ್ಷಿಗಳನ್ನೂ ನಾಶ ಮಾಡಿಲ್ಲ . ಆರ್ಥಿಕ ಜಾರಿ ನಿರ್ದೇಶನಾಲಯ ಕೋರಿದ ಸಾಕ್ಷಿಗಳನ್ನು ಕೊಟ್ಟಿದ್ದಾರೆ.ಇನ್ನಷ್ಟು ಸಾಕ್ಷಿಗಳ ಅಗತ್ಯವಿದೆಯೆಂದರೆ ಕೊಡಲು ಸಿದ್ಧರಿದ್ದಾರೆ ಎಂದು ಹೇಳಿದ್ದರು.
ಆರ್ಥಿಕ ಜಾರಿ ನಿರ್ದೇಶನಾಲಯ ಬಯಸಿದ ಕ್ಷಣದಲ್ಲಿ ವಿಚಾರಣೆಗೆ ಹಾಜರಾಗಲು ತಮ್ಮ ಪರ ಕಕ್ಷೀದಾರರು ಸಿದ್ಧರಿದ್ದಾರೆ.ಯಾವ ಕಾರಣಕ್ಕೂ ಅವರು ದೇಶದಿಂದ ಪಲಾಯನ ಮಾಡುವುದಿಲ್ಲ ಎಂದು ನ್ಯಾಯಾಲಯಕ್ಕೆ ವಿವರಿಸಿದ್ದರು.
ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತೀರ್ಪನ್ನು ಕಾಯ್ದಿರಿಸಿದ್ದ ದೆಹಲಿಯ ಹೈಕೋರ್ಟ್ ಇಂದು ಡಿಕೆಶಿಗೆ ಜಾಮೀನು ಮಂಜೂರು ಮಾಡಿದ್ದು ಆ ಮೂಲಕ ಸತತ 50 ದಿನಗಳ ಕಾಲದ ಸೆರೆಮನೆ ವಾಸದಿಂದ ಮುಕ್ತಿ ಪಡೆದಂತಾಗಿದೆ.ಇಂದು ದೆಹಲಿ ಹೈಕೋರ್ಟ್ ಜಾಮೀನು ನೀಡಿದರೂ ಅವರನ್ನು ತಕ್ಷಣವೇ ಸಿಬಿಐ ಬಂಧಿಸುವ ಬಗ್ಗೆ ಭೀತಿ ವ್ಯಕ್ತವಾಗಿತ್ತಾದರೂ ಹಾಗೆ ಆಗಲಿಲ್ಲ.
ಡಿಕೆಶಿ ಬಂಧನದ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಮಾತ್ರವಲ್ಲದೆ ರಾಷ್ಟ್ರೀಯ ಕಾಂಗ್ರೆಸ್ ಪಾಳೆಯದಲ್ಲೂ ತಲ್ಲಣವಾಗಿತ್ತು.
ಅವರ ಬಂಧನವನ್ನು ಖಂಡಿಸಿ ಒಕ್ಕಲಿಗ ಸಮುದಾಯ ಬೀದಿಗಿಳಿದು ಪ್ರತಿಭಟಿಸಿತ್ತಾದರೂ ಕೊನೆಗೆ ನ್ಯಾಯಾಂಗದ ವಿಷಯ ವಾಗಿದ್ದರಿಂದ ಈ ಪ್ರತಿಭಟನೆಯನ್ನು ಹೆಚ್ಚು ಲಂಬಿಸಲು ಹೋಗಿರಲಿಲ್ಲ.ಈ ಮಧ್ಯೆ ಡಿಕೆಶಿ ಅವರನ್ನು ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ತಮ್ಮ ಬೆಂಬಲಿಗರ ಜತೆ ಸೇರಿ ಭೇಟಿ ಮಾಡಿದ್ದರೆ,ಬುಧವಾರ ಎಐಸಿಸಿ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಅವರು ತಿಹಾರ್ ಜೈಲಿಗೆ ಭೇಟಿ ನೀಡಿ ಡಿಕೆಶಿಗೆ ಧೈರ್ಯ ಹೇಳಿದ್ದರು.ಹೀಗೆ ಕೊನೆಗೂ ಡಿಕೆಶಿ ಸೆರೆಮನೆ ವಾಸದಿಂದ ಮುಕ್ತರಾಗಿದ್ದು ಈ ಬೆಳವಣಿಗೆ ರಾಜಕೀಯ ವಲಯಗಳಲ್ಲಿ ಮಾತ್ರವಲ್ಲದೆ ಸಾರ್ವಜನಿಕ ವಲಯಗಳಲ್ಲೂ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ