ಜಿಡಿಪಿ ಸುಧಾರಣೆ ಕಾಯ್ದುಕೊಂಡಿದೆ: ನಿರ್ಮಲಾ ಸೀತಾರಾಮನ್

ನವದೆಹಲಿ

       ಭಾರತದ ಒಟ್ಟು ದೇಶೀಯ ಉತ್ಪನ್ನ ಜಿಡಿಪಿ ಬೆಳವಣಿಗೆ ಅಮೆರಿಕ ಮತ್ತು ಚೀನಾ ಸೇರಿದಂತೆ ಇತರ ದೇಶಗಳಿಗಿಂತ ಹೆಚ್ಚಿದ್ದು ಸುಧಾರಣೆ ವೇಗವನ್ನು ಕಾಯ್ದುಕೊಂಡಿದೆ ಎಂದು ಆರ್ಥಿಕ ಬೆಳವಣಿಗೆಯ ಉತ್ತೇಜನಕ್ಕೆ ಕೈಗೊಂಡ ಕ್ರಮಗಳ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ

       ಭಾರತದ ಜಿಡಿಪಿ ಬೆಳವಣಿಗೆ ಇತರ ದೇಶಗಳಿಗಿಂತ ಹೆಚ್ಚಿದೆ. ಖರೀದಿ ಸಾಮರ್ಥ್ಯ ತಗ್ಗಿದ್ದು ಇಂತಹ ಕುಂಠಿತ ಬೆಳವಣಿಗೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಮಾತ್ರವಲ್ಲದೇ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲೂ ಇದೆ. ಜಾಗತಿಕ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಎದುರಾಗಿದೆ ಎಂದು ಹೇಳಿದರು.

        ಈ ನಿಟ್ಟಿನಲ್ಲಿ ಸರ್ಕಾರ 2014 ರಿಂದ ಸುಧಾರಣೆಯನ್ನು ಕಾರ್ಯಸೂಚಿಯಲ್ಲಿ ಅಗ್ರಸ್ಥಾನದಲ್ಲಿರಿಸಿದೆ ಎಂದು ಅವರು ಹೇಳಿದರು.

      ಸುಧಾರಣೆಯ ವೇಗವನ್ನು ಕಾಪಾಡಿಕೊಳ್ಳಲಾಗಿದೆ ಎಂದ ಅವರು, ಅದು ಸ್ವಯಂ ಪ್ರಮಾಣೀಕರಣ ಅಥವಾ ಕಾರ್ಮಿಕ ಸುಧಾರಣೆ ಅಥವಾ ಪರಿಸರ ಅನುಮತಿ ಯಾವುದೇ ಇರಲಿ ಸುಧಾರಣೆ ಕಾಣಬಹುದಾಗಿದೆ ಎಂದು ಸ್ಪಷ್ಟಪಡಿಸಿದರು.

     ಪ್ರಸ್ತುತ ನಿರೀಕ್ಷಿತ ಜಾಗತಿಕ ಜಿಡಿಪಿ ಬೆಳವಣಿಗೆಯು ಶೇ.3.2 ರಷ್ಟಿದೆ ಮತ್ತು ಬಹುಶಃ ಇನ್ನೂ ಕಡಿಮೆಯಾಗುವತ್ತ ಪರಿಷ್ಕರಿಸಬಹುದಾಗಿದೆ.

      ಕಾನೂನು ಕ್ರಮ ಜರುಗಿಸುವತ್ತ ಸರ್ಕಾರ ಆಸಕ್ತಿ ವಹಿಸಿದೆ ಎಂಬ ಕಲ್ಪನೆಗೆ ಸಾಕ್ಷಾಧಾರಗಳಿಲ್ಲ. ಸಾಧ್ಯವಾದರೆ ಕಾನೂನು ಕ್ರಮ ಜರುಗಿಸುವುದಕ್ಕಿಂತ ಸರ್ಕಾರ ದಂಡ ವಿಧಿಸುವ ಪರವಾಗಿದೆ. ಕಂಪೆನಿ ಕಾಯ್ದೆಯಡಿ 14 ಸಾವಿರ ಕಾನೂನು ಕ್ರಮಗಳನ್ನು ಹಿಂಪಡೆಯಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

     ತೆರಿಗೆ ಸರಳೀಕರಣಕ್ಕೆ ಕ್ರಮಗಳ ಬಗ್ಗೆ ಮಾತನಾಡಿದ ನಿರ್ಮಲಾ ಸೀತಾರಾಮನ್, ತೆರಿಗೆ ವಿಧಿಸುವಾಗ ನೋಟಿಸ್, ಸಮನ್ಸ್, ಆದಾಯ ತೆರಿಗೆ ಅಧಿಕಾರಿಗಳ ಆದೇಶಗಳನ್ನು ಕೇಂದ್ರೀಕೃತ ವ್ಯವಸ್ಥೆಯಿಂದ ನೀಡಲಾಗುವುದು ಎಂದು ಹೇಳಿದರು.

     ಈ ವರ್ಷದ ವಿಜಯ ದಶಮಿ ದಿನದಿಂದ ಮುಖತಃ ಭೇಟಿ ಇಲ್ಲದೇ ಪರಿಶೀಲನೆ ನಡೆಯಲಿದೆ, ಅಂದರೆ ಅಧಿಕಾರಿಯನ್ನು ಮುಖತಃ ಕಂಡು ಅವರ ಕಿರುಕುಳ ಎನಿಸುವಂತಹ ಪ್ರಶ್ನೆಗಳಿಗೆ ಉತ್ತರ ನೀಡುವ ಅಗತ್ಯವಿರುವುದಿಲ್ಲ ಎಂದು ಅವರು ಹೇಳಿದರು.

      ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಮರು ಬಂಡವಾಳೀಕರಣಕ್ಕಾಗಿ ಸರ್ಕಾರ 70 ಸಾವಿರ ಕೋಟಿ ರೂ. ಮುಂಗಡ ಹಣವನ್ನು ಬಿಡುಗಡೆ ಮಾಡುತ್ತಿದೆ ಎಂದ ಅವರು, ಬ್ಯಾಂಕುಗಳು ಮನೆ, ವಾಹನ ಸಾಲಗಳನ್ನು ಅಗ್ಗವಾಗಿಸುತ್ತದೆ ಎಂದು ಭರವಸೆ ನೀಡಿದರು.

    ರೆಪೊ ದರ-ಸಂಬಂಧಿತ ಉತ್ಪನ್ನಗಳನ್ನು ಪ್ರಾರಂಭಿಸಲು ಬ್ಯಾಂಕುಗಳು ಒಪ್ಪಿಕೊಂಡಿದ್ದು, ಇದರಿಂದಾಗಿ ಗೃಹ, ವಾಹನ ಮತ್ತು ಇತರ ಚಿಲ್ಲರೆ ಸಾಲಗಳ ಮಾಸಿಕ ಕಂತು ಪಾವತಿ (ಇಎಂಐ) ಗಳು ಕಡಿಮೆಯಾಗಲಿವೆ ಎಂದು ಅವರು ಹೇಳಿದರು.

   ನವೋದ್ಯಮಗಳಿಗೆ ಉತ್ತೇಜನ ನೀಡಲು ಸ್ಟಾರ್ಟ್ ಅಪ್‌ಗಳಿಗೆ ಏಂಜಲ್ ತೆರಿಗೆ ನಿಬಂಧನೆಗಳನ್ನು ತೆಗೆದು ಹಾಕಲಾಗಿದೆ ಎಂದು ಸಚಿವರು ಹೇಳಿದರು.

     ಸಾಮಾಜಿಕ ಸಾಂಸ್ಥಿಕ ಜವಾಬ್ದಾರಿ (ಸಿಎಸ್ಆರ್) ಉಲ್ಲಂಘನೆಯನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲಾಗುವುದಿಲ್ಲ ಬದಲಾಗಿ ಅದು ನಾಗರಿಕ ಹೊಣೆಗಾರಿಕೆಯಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link