ನವದೆಹಲಿ
ಸದ್ಯ ದೇಶದಲ್ಲಿ ಆಗುತ್ತಿರುವ ಗಲಾಟೆ , ಧರಣಿಗಳು ಮತ್ತು ಕೋಲಾಹಲಗಳ ನಡುವೆ ಸಮತೋಲನ ಕಾಪಾಡಿಕೊಂಡು ಉತ್ತಮ ಆಡಳಿತ ನಡೆಸುವ ರಾಜ್ಯಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ಉತ್ತಮ ಆಡಳಿತ ಸೂಚ್ಯಂಕ ಬಿಡುಗಡೆ ಮಾಡಿದೆ.
ಇದರಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ ದೊರೆತಿದೆ. ಸಮಗ್ರ ಆಡಳಿತ ಪಟ್ಟಿಯಲ್ಲಿ ತಮಿಳುನಾಡು ಮೊದಲ ಸ್ಥಾನ ಗಳಿಸಿದ್ದರೆ, ಮಹಾರಾಷ್ಟ್ರ ಎರಡನೇ ಸ್ಥಾನ ಗಳಿಸಿದೆ.
ಇನ್ನು ವಲಯವಾರು ಸಾಧನೆಗಳಲ್ಲಿ ಅರ್ಥಿಕ ಆಡಳಿತದಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ ಲಭಿಸಿದೆ. ರಾಜ್ಯಗಳ ಸಾಧನೆ ಆಧಾರದ ಮೇಲೆ ಉತ್ತಮ ಆಡಳಿತ ಸೂಚ್ಯಂಕ ತಯಾರು ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೊದಲ ಅವಧಿಯಲ್ಲಿಯೇ ನಿರ್ಧರಿಸಲಾಗಿತ್ತು, ಆದರೆ ಅದು ಈ ವರ್ಷ ಜಾರಿಗೆ ತರಲಾಗಿದೆ.
ವರದಿ ತಯಾರು ಮಾಡುವ ಸಮಯದಲ್ಲಿ ಒಟ್ಟು 10 ವಲಯಗಳು, 50 ಸೂಚಿಗಳನ್ನು ಮಾನದಂಡವಾಗಿ ಇಟ್ಟುಕೊಳ್ಳಲಾಗಿತ್ತು. ಶಿಕ್ಷಣ, ಆರೋಗ್ಯ, ಆರ್ಥಿಕ ಪ್ರಗತಿ, ಪರಿಸರ ಸಂರಕ್ಷಣೆ, ಕಾನೂನು ಸೇವೆಗಳು ಸಾರ್ವಜನಿಕರಿಗೆ ಹೇಗೆ ತಲುಪುತ್ತವೆ ಎಂಬುದನ್ನು ಪರಿಗಣಿಸಿ ಅಳೆಯಲಾಗಿದೆ.
ಕೇಂದ್ರ ಸರ್ಕಾರ ಸಿದ್ದಪಡಿಸಿರುವ ವರದಿಯನ್ವಯ ಕರ್ನಾಟಕವು ಆರ್ಥಿಕ ಪ್ರಗತಿಯಲ್ಲಿ 1ನೇ ಸ್ಥಾನ, ಕಾನೂನು ಸೇವೆಯಲ್ಲಿ 7, ಪರಿಸರ ಸಂರಕ್ಷಣೆಯಲ್ಲಿ 7, ವಾಣಿಜ್ಯ ವಿಭಾಗದಲ್ಲಿ 9, ಆರೋಗ್ಯ ಕ್ಷೇತ್ರದಲ್ಲಿ 9, ಮೂಲ ಸೌಕರ್ಯ ವಿಭಾಗದಲ್ಲಿ 10, ಸಮಾಜ ಕಲ್ಯಾಣ ಕ್ಷೇತ್ರದಲ್ಲಿ 10, ಕೃಷಿ ವಲಯದಲ್ಲಿ 12, ಮಾನವ ಸಂಪನ್ಮೂಲದಲ್ಲಿ 13 ನೇ ಸ್ಥಾನ ಗಳಿಸಿದೆ. ಆದರೆ ವಾಸ್ತವ ಸ್ಥಿತಿಗೂ ವರದಿಗೂ ಅಜಗಜಾಂತರ ವ್ಯತ್ಯಾಸ ಇದೆ ಎಂದು ಕೆಲವರು ಟೀಕಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ