ಮಾಜಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್​ ನಿಧನ

ನವದೆಹಲಿ

   ಕರ್ನಾಟಕ ದ ರಾಜ್ಯದ ಮಾಜಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ (82) ಅವರು ಇಂದು ವಿಧಿವಶರಾಗಿದ್ದಾರೆ. ಕೇಂದ್ರದ ಮಾಜಿ ಕಾನೂನು ಸಚಿವರು ಹಾಗೂ ಕಾಂಗ್ರೆಸ್​ ಹಿರಿಯ ನಾಯಕರೂ ಆಗಿದ್ದ ಭಾರದ್ವಾಜ್, ಹಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

    ಹಂಸರಾಜ್ ಭಾರದ್ವಾಜ್ ಅವರು, 2009 ರಿಂದ 2014 ರವರೆಗೆ ಕರ್ನಾಟಕದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೇ ಹೆಚ್ಚುವರಿಯಾಗಿ 2012 ರಿಂದ 2013, ಮಾರ್ಚ್​ ವರೆಗೆ ಕೇರಳದ ರಾಜ್ಯಪಾಲರಾಗಿಯೂ ಕರ್ತವ್ಯ ನಿಭಾಯಿಸಿದ್ದರು. ಕರ್ನಾಟಕದಲ್ಲಿ ಒಟ್ಟು 4 ಮುಖ್ಯಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸಿದ್ದರು.

   ಹಂಸರಾಜ್ ಭಾರದ್ವಾಜ್ ಗಾಂಧಿ ಕುಟುಂಬಕ್ಕೆ ನಿಷ್ಠಾವಂತರಾಗಿದ್ದರು. 1982ರಲ್ಲಿ ಮೊದಲ ಬಾರಿಗೆ ಮಧ್ಯಪ್ರದೇಶ ರಾಜ್ಯವನ್ನ ಪ್ರತಿನಿಧಿಸಿ ರಾಜ್ಯಸಭೆಗೆ ಆಯ್ಕೆಯಾಗಿದ್ದ ಅವರು, ಕೇಂದ್ರದಲ್ಲಿ ಅನೇಕ ಖಾತೆಗಳ ಸಚಿವರಾಗಿದ್ದರು.

    ಇನ್ನು ನಾಳೆ ಬೆಳಗ್ಗೆ ದೆಹಲಿಯಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ ಎಂದು ತಿಳಿದು ಬಂದಿದೆ

    ಇನ್ನು, ಹಂಸರಾಜ್ ಭಾರದ್ವಾಜ್ ಅವರ ನಿಧನಕ್ಕೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ರವಿಶಂಕರ್ ಪ್ರಸಾದ್​ ಟ್ವೀಟ್​ ಮೂಲಕ ಸಂತಾಪ ಸೂಚಿಸಿದ್ದಾರೆ.