ನವದೆಹಲಿ
ಕಡಿಮೆ ದರದ ಪ್ರಯಾಣಕ್ಕೆ ಜನಪ್ರಿಯವಾಗಿರುವ ವಿಮಾನಯಾನ ಸಂಸ್ಥೆ ಇಂಡಿಗೊ ಮಂಗಳವಾರ ತನ್ನ ಬೇಸಿಗೆ ಮಾರಾಟ ಕೊಡುಗೆ ಪ್ರಕಟಿಸಿದ್ದು, ಜೂನ್ 26 ರಿಂದ ಸೆಪ್ಟೆಂಬರ್ 28 ರ ನಡುವಿನ ಅವಧಿಯ ಪ್ರಯಾಣಕ್ಕೆ 999ರೂ.ಗೆ ಆರಂಭಿಕ ದರ ಘೋಷಿಸಿದೆ.
ಈ ರಿಯಾಯಿತಿ ಕೊಡುಗೆ ಅಡಿಯಲ್ಲಿ, ಇಂಡಿಗೊ ಕಂಪನಿಯು ವಿದೇಶಿ ಮಾರ್ಗಗಳಲ್ಲಿ ಆರಂಭಿಕ 3,499 ರೂ ಮತ್ತು ದೇಶೀಯ ಮಾರ್ಗಗಳಲ್ಲಿ 999 ರೂ.ಗೆ ಸೇವೆ ಒದಗಿಸಲಿದೆ.
ಟಿಕೆಟ್ ಬುಕ್ಕಿಂಗ್ ಅವಧಿ ಜೂನ್.11ರಿಂದ ಆರಂಭವಾಗಲಿದ್ದು ಜೂನ್.14ಕ್ಕೆ ಅಂತ್ಯಗೊಳ್ಳಲಿದೆ. ಈ ಅವಧಿಯಲ್ಲಿ ಟಿಕೆಟ್ ಬುಕ್ ಮಾಡಿದವರು ಜೂನ್ 26 ರಿಂದ ಸೆಪ್ಟೆಂಬರ್ 28 ರ ನಡುವಿನ ಅವಧಿಯಲ್ಲಿ ಪ್ರಯಾಣಿಸಬಹುದಾಗಿದೆ ಎಂದು ಇಂಡಿಗೊ ಪ್ರಕಟಣೆ ತಿಳಿಸಿದೆ.
ಅಗ್ಗದ ದರದ ವಿಮಾನಯಾನ ಸಂಸ್ಥೆ ತನ್ನ ಬೇಸಿಗೆ ಮಾರಾಟ ಕೊಡುಗೆ ಮೂಲಕ 10 ಲಕ್ಷ ಟಿಕೆಟ್ ಮಾರಾಟ ಮಾಡುವ ಗುರಿ ಹೊಂದಿದೆ.
ಇಂಡಿಗೊ ರಿಯಾಯಿತಿ ಸೀಟು ಲಭ್ಯತೆ ಅವಲಂಬಿಸಿದೆ ಮತ್ತು ಕೊಡುಗೆ ಅವಧಿಯ ಬುಕ್ಕಿಂಗ್‌ಗೆ ಮಾತ್ರ ಸೀಮಿತವಾಗಿದೆ. ಪ್ರಯಾಣಕ್ಕೆ 15 ದಿನ ಮುಂಚಿತವಾಗಿ ಸೂಚಿಸಲಾಗುತ್ತದೆ ಮತ್ತು ಸೆ.28, 2019ರ ನಂತರ ಪ್ರಯಾಣಕ್ಕೆ ಅವಕಾಶವಿರುವುದಿಲ್ಲ ಎಂದಿದೆ.
ಟಿಕೆಟ್ ದರಗಳು ಹೀಗಿವೆ: ದೆಹಲಿ-ಅಹಮದಾಬಾದ್ 1,799 ರೂ, ದೆಹಲಿ-ಬೆಂಗಳೂರು 3,299 ರೂ, ದೆಹಲಿ-ಚಂಡೀಘಡ 1,299 ರೂ, ದೆಹಲಿ-ಜೈಪುರ 1,499 ರೂ, ಜೈಪುರ-ದೆಹಲಿ 1,799 ರೂ, ಗೋವಾ-ಹೈದರಾಬಾದ್ 1,499 ರೂ, ಹೈದರಾಬಾದ್-ಬೆಂಗಳೂರು 1,899 ರೂ ಮತ್ತು ದೆಹಲಿ-ಡೆಹ್ರಾಡೂನ್ ರೂ 1,999 ರೂ.