ನವದೆಹಲಿ:
ನ್ಯಾಯಾಂಗ ವ್ಯವಸ್ಥೆ ಬಗ್ಗೆ ನಿಂದನಕಾರಿ ಟ್ವೀಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆಗೆ ಗುರಿಯಾಗಿರುವ ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ತಮಗೆ ನೀಡಲಾಗುವ ಶಿಕ್ಷೆಯ ಪ್ರಮಾಣದ ಬಗ್ಗೆ ಮತ್ತೊಂದು ನ್ಯಾಯಪೀಠ ವಿಚಾರಣೆ ನಡೆಸಬೇಕೆಂದು ಮಾಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಳ್ಳಿಹಾಕಿದೆ.
ಇಂದು ತೀರ್ಪು ನೀಡಿದ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ, ಆದೇಶದ ಬಗ್ಗೆ ಈ ನ್ಯಾಯಪೀಠ ಪರಾಮರ್ಶೆ ನಡೆಸುವವರೆಗೂ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವುದಿಲ್ಲ ಎಂದು ಭರವಸೆ ನೀಡಿದೆ.
ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಹಿರಿಯ ವಕೀಲ ದುಶ್ಯಂತ್ ದಾವೆ ತಮ್ಮ ಕಕ್ಷಿದಾರನಿಗೆ ನೀಡಲಾಗುವ ಶಿಕ್ಷೆಯ ಪ್ರಮಾಣದ ಬಗ್ಗೆ ಮತ್ತೊಂದು ನ್ಯಾಯಪೀಠ ವಿಚಾರಣೆ ನಡೆಸುವಂತೆ ಕೋರಿದರು. ಆದರೆ ಮತ್ತೊಂದು ನ್ಯಾಯಪೀಠದಿಂದ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮನವಿಯನ್ನು ತಿರಸ್ಕರಿಸಿತು.
ನ್ಯಾಯಮೂರ್ತಿಗಳಾದ ಬಿ ಆರ್ ಗವಿ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ನ್ಯಾಯಪೀಠ, ಮತ್ತೊಂದು ಪೀಠದಿಂದ ವಿಚಾರಣೆ ನಡೆಸಬೇಕೆಂದು ಕೋರುವುದು ಅನುಚಿತ ಕ್ರಮ. ತಾನು ಸದ್ಯದಲ್ಲಿಯೇ ಸೇವೆಯಿಂದ ನಿವೃತ್ತಿಯಾಗುತ್ತಿದ್ದು ಶಿಕ್ಷೆಯ ಪ್ರಮಾಣ ಮುಂದೂಡಿಕೆಯನ್ನು ಕೇಳುವಂತಿಲ್ಲ, ಈ ಪ್ರಕರಣ ಮೊದಲು ಇತ್ಯರ್ಥವಾಗಬೇಕು ಎಂದಿತು.
ಮುಖ್ಯ ಪೀಠ ಇರುವಾಗ ಮತ್ತೊಂದು ಪೀಠ ಪ್ರಕರಣದ ವಿಚಾರಣೆ ನಡೆಸಿದ್ದನ್ನು ಇದುವರೆಗೆ ನ್ಯಾಯಾಲಯದ ಇತಿಹಾಸದಲ್ಲಿ ಕಂಡಿದ್ದೀರಾ?ನಾವು ಅನುಚಿತ ಕ್ರಮ ತೋರಿಸಬೇಕೆಂದು ನೀವು ಕೇಳುತ್ತಿದ್ದೀರಾ ಎಂದು ನ್ಯಾಯಪೀಠ ನ್ಯಾಯವಾದಿ ಪ್ರಶಾಂತ್ ಭೂಷಣ್ ಗೆ ಛೀಮಾರಿ ಹಾಕಿತು