ಪ್ರವಾಹ ಎದುರಿಸಲು ಕಾಜಿರಂಗಾ ರಾಷ್ಟ್ರೀಯ ಉದ್ಯಾನವನ ಸಜ್ಜು

ಗುವಾಹಟಿ

     ದೀರ್ಘಕಾಲಿಕ ಪ್ರವಾಹದಿಂದ ಹಾಳಾಗಿದ್ದ ಕಾಜಿರಂಗ ರಾಷ್ಟ್ರೀಯ ಉದ್ಯಾನವನವನ್ನು ಸುವ್ಯವಸ್ಥಿತಗೊಳಿಸುವ ಕಾರ್ಯ ನಡೆಯುತ್ತಿದ್ದು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನಾವಾಲ್ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

      ಉದ್ಯಾನವನದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಅಲ್ಲಿನ ಎಲ್ಲಾ ಪ್ರಾಣಿ, ಪಕ್ಷಿಗಳ ರಕ್ಷಣೆ ಮಾಡುವಂತೆ ಉದ್ಯಾನವನದ ಅಧಿಕಾರಿಗೆ ಮುಖ್ಯಮಂತ್ರಿ ನಿರ್ದೇಶನ ನೀಡಿದರು.

      ವಿಶ್ವ ಪರಂಪರೆಯ ತಾಣವಾಗಿರುವ ಉದ್ಯಾನದಲ್ಲಿ ಪ್ರಾಣಿಗಳು ಪ್ರವಾಹಕ್ಕೆ ತುತ್ತಾಗದಂತೆ ರಕ್ಷಣೆ ಮಾಡಲು ನಿರ್ಮಿಸಲಾದ ಎತ್ತರದ ಪ್ರದೇಶಗಳನ್ನು ಅವರು ವೀಕ್ಷಿಸಿದರು. ಸೋನಾವಾಲ್ ಉದ್ಯಾನವನದ ಅಗೋರಾಟೋಲಿ ಪ್ರದೇಶಕ್ಕೆ ಭೇಟಿ ನೀಡಿ, ಪ್ರವಾಹಕ್ಕೆ ಒಳಗಾಗಿರುವ ಪ್ರಾಣಿಗಳಿಗೆ ಸುರಕ್ಷಿತವಾದ ಆಶ್ರಯ, ಆಹಾರ ಮತ್ತು ಚಿಕಿತ್ಸೆ ನೀಡಬೇಕೆಂದು ಅರಣ್ಯ ಇಲಾಖೆಯವರಿಗೆ ಸೂಚಿಸಿದರು.

      ಅರಣ್ಯ ಇಲಾಖೆ ಈಗಾಗಲೇ 33 ಎತ್ತರ ಪ್ರದೇಶಗಳನ್ನು ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದಲ್ಲಿ ಸ್ಥಾಪಿಸಿದ್ದು, ಅವುಗಳಲ್ಲಿ 10 ಅಗೋರಾಟೋಲಿ ಶ್ರೇಣಿಯಲ್ಲಿವೆ. ಪ್ರವಾಹ ಎದುರಾದಾಗ ರಾಷ್ಟ್ರೀಯ ಉದ್ಯಾನವನಕ್ಕೆ ಅಧಿಕ ನೀರು ಹರಿಯುತ್ತದೆ. ಈ ಸಂದರ್ಭದಲ್ಲಿ ಆಶ್ರಯ ಪಡೆಯಲು ಅಗೋರಾಟೋಲಿ ಪ್ರದೇಶ ಸೂಕ್ತವಾಗಿದೆ ಎಂದು ಮೊದಲ ಬಾರಿಗೆ ಅಗೋರಾಟೋಲಿ ಶ್ರೇಣಿಗೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಅರಣ್ಯ ಇಲಾಖೆಗೆ ತಿಳಿಸಿದರು.

       ಉದ್ಯಾನವನದ ಆಡಳಿತಾಧಿಕಾರಿಯೊಂದಿಗೆ ಮಾತನಾಡಿದ ಅವರು, ಉದ್ಯಾನವನಕ್ಕೆ ಬರುವ ಪ್ರವಾಸಿಗರನ್ನು ಆಕರ್ಷಿಸಲು ವಿವಿಧ ಸೌಲಭ್ಯಗಳನ್ನು ನೀಡುವಂತೆ ಪ್ರಾಧಿಕಾರಕ್ಕೆ ಸೂಚಿಸಿದರು. ಅಗೋರಾಟೊಲಿ ವ್ಯಾಪ್ತಿಯ ಮತ್ತು ಸೊಹೊಲ ಬೀಲ್ ನಲ್ಲಿ 1.2 ಕಿ.ಮೀ.ನಷ್ಟು ಸುಗಮ ರಸ್ತೆ ನಿರ್ಮಾಣಕ್ಕೆ ಸೂಚಿಸಿದರು. ಉದ್ಯಾನವನದ ಎತ್ತರದ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಸೋನೊವಾಲ್ ಉದ್ಯಾನ ಪ್ರಾಧಿಕಾರದ ಸಭೆ ಕರೆದು ಅರಣ್ಯ ಇಲಾಖೆ ಮತ್ತು ಸ್ಥಳೀಯ ಆಡಳಿತದೊಂದಿಗೆ ಉದ್ಯಾನವನಕ್ಕೆ ಪ್ರವಾಸಿಗರನ್ನು ಆಕರ್ಷಿಸಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚಿಸಿದರು.

      ಅರಣ್ಯ ಇಲಾಖೆಯೊಂದಿಗೆ ಮಾತನಾಡಿ, ಪ್ರವಾಸಿಗರಿಗೆ ಕೊಹೊರ, ಬಗೋರಿ ಮತ್ತು ಅಗೊರಟೊಲಿ ಪ್ರದೇಶಗಳ ಕುರಿತಂತೆ ಪ್ರವಾಸಿಗರನ್ನು ಆಕರ್ಷಿಸಲು ಸಿದ್ಧ ಕೈಪಿಡಿಯೊಂದನ್ನು ರೂಪಿಸಲು ತಿಳಿಸಿದರು.

      ಅರಣ್ಯ ಇಲಾಖೆ ಮತ್ತು ಇಲ್ಲಿನ ಸ್ಥಳೀಯ ನಿವಾಸಿಗಳು ಕಾಜಿರಂಗ ರಾಷ್ಟ್ರೀಯ ಉದ್ಯಾನವನವನ್ನು ನೋಡಲು ವಿದೇಶಗಳಿಂದ ಬರುವ ಜನರಿಗೆ ರುಚಿಯಾದ ಮತ್ತು ಪ್ರಾದೇಶಿಕ ಭಕ್ಷ್ಯಗಳನ್ನು ಒದಗಿಸಲು ಮುಂದಾದಲ್ಲಿ ಉದ್ಯೋಗ ಸೃಷ್ಟಿಯ ಜೊತೆಗೆ ಸ್ಥಳೀಯ ಸಂಪ್ರದಾಯ, ಸಂಸ್ಕೃತಿಯನ್ನು ಉಳಿಸಿಕೊಂಡಂತಾಗುತ್ತದೆ ಎಂದರು. ಪ್ರವಾಸಿಗರಿಂದ ಉದ್ಯಾನವನ ಹಾಗೂ ಪ್ರಾಣಿ ಪಕ್ಷಿಗಳಿಗೆ ಧಕ್ಕೆಯಾಗದಂತೆ ಜಾಗೃತಿ ವಹಿಸುವಂತೆ ಅವರು ಸೂಚಿಸಿದರು. ರಾಷ್ಟ್ರೀಯ ಉದ್ಯಾನವನದ ಬಳಿ ಪ್ರವಾಸೋದ್ಯಮದ ಅನುಕೂಲಕ್ಕಾಗಿ ಹೆಲಿಪ್ಯಾಡ್ ನಿರ್ಮಿಸುವ ಅಗತ್ಯವಿದೆ. ಸರ್ಕಾರದಿಂದ ಉದ್ಯಾನವನದ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ದೊರೆಯುತ್ತದೆ ಎಂದು ಅವರು ತಿಳಿಸಿದರು.

      ಮುಖ್ಯಮಂತ್ರಿಗಳ ಉದ್ಯಾನವನ ಭೇಟಿ ಸಂದರ್ಭದಲ್ಲಿ ರಾಜ್ಯ ಕೃಷಿ ಮಂತ್ರಿ ಅಟಲ್ ಬೋರಾ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಉದ್ಯಾನವನ ಪ್ರಾಧಿಕಾರ ಮತ್ತು ಸ್ಥಳೀಯ ಆಡಳಿತ ಮಂಡಳಿಯವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap