ಮುಂಬೈ
ರಾಜ್ಯದ ಜನತೆಯ ಹಿತದೃಷ್ಠಿಯಿಂದ ಸರ್ಕಾರ ರಚಿಸಲು ಸೈದ್ಧಾಂತಿಕವಾಗಿ ವೈಮನಸ್ಸಿದ್ದರು ಎನ್ಸಿಪಿ ಮತ್ತು ಕಾಂಗ್ರೆಸ್ ಜತೆ ಕೈಜೋಡಿಸಿದ್ದೇವೆ ಆದರೆ ನಾನು ಯಾರ ಜೊತೆ ಕೈಜೋಡಿಸಿದರು ನನ್ನ ‘ಕೇಸರಿ’ ಬಣ್ಣವನ್ನು ಬದಲಿಸಿಕೊಂಡಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಬಾಂದ್ರಾದ ಕುರ್ಲಾ ಕಾಂಪ್ಲೆಕ್ಸ್ನಲ್ಲಿ ಶಿವಸೇನಾ ಆಯೋಜಿಸಿದ್ದ ಬೃಹತ್ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಮುಖ್ಯಮಂತ್ರಿ ಹುದ್ದೆಗೆ ಏರುವ ಮೂಲಕ ಶಿವಸೇನಾ ಸಂಸ್ಥಾಪಕ ಬಾಳಠಾಕ್ರೆ ಅವರ ಕನಸನ್ನು ಈಡೇರಿಸಿದ್ದಕ್ಕಾಗಿ ಗುರುವಾರ ನಡೆದ ಬಾಳ ಠಾಕ್ರೆ ಜನ್ಮದಿನೋತ್ಸವದ ಸಂದರ್ಭದಲ್ಲಿ ಉದ್ಧವ್ ಅವರನ್ನು ಅಭಿನಂದಿಸಲಾಯಿತು.
ನಮ್ಮ ಬಣ್ಣ ಕೇಸರಿ. ನಮ್ಮ ಅಂತರಂಗ ಕೂಡ ಕೇಸರಿ ಎಂದಿರುವ ಉದ್ಧವ್ ಠಾಕ್ರೆ, ಬಹುಕಾಲದ ವಿರೋಧಿಗಳಾದ ಕಾಂಗ್ರೆಸ್ ಮತ್ತು ಎನ್ಸಿಪಿ ಜತೆ ಸೇರಿ ಸರ್ಕಾರ ರಚಿಸಿದ ಮಾತ್ರಕ್ಕೆ ತಮ್ಮ ನಿಲುವು ಬದಲಾಗುವುದಿಲ್ಲ ಎಂದು ತಮ್ಮ ವಿರುದ್ಧದ ಟೀಕೆಗಳಿಗೆ ತೀಕ್ಷ್ಣ ಉತ್ತರ ನೀಡಿದ್ದಾರೆ.