ನವದೆಹಲಿ:
ಜೀವ ಮತ್ತು ವೈದ್ಯಕೀಯ ವಿಮೆ ಪ್ರೀಮಿಯಂ ಮೇಲಿನ ಶೇ. 18 ರಷ್ಟು ಜಿಎಸ್ ಟಿಯನ್ನು ತೆಗೆದು ಹಾಕುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿರುವ ಗಡ್ಕರಿ, ವಿಮೆ ಉದ್ಯಮ ವಿಚಾರಕ್ಕೆ ಸಂಬಂಧಿಸಿದಂತೆ ನಾಗಪುರ ವಿಭಾಗೀಯದ ಜೀವ ವಿಮಾ ನಿಗಮ ನೌಕರರ ಒಕ್ಕೂಟ ಸಲ್ಲಿಸಿರುವ ಮನವಿ ಪತ್ರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಜೀವ ವಿಮೆ ಮತ್ತು ವೈದ್ಯಕೀಯ ವಿಮಾ ಯೋಜನೆಗಳ ಪ್ರೀಮಿಯಂ ಮೇಲೆ ಜಿಎಸ್ ಟಿ ಹೇರುವುದು ಜೀವನದ ಅನಿಶ್ಚಿತತೆಗಳ ಮೇಲೆ ತೆರಿಗೆ ವಿಧಿಸಿದಂತೆ ಆಗುತ್ತದೆ. ತನ್ನ ಕುಟುಂಬಕ್ಕೆ ಭದ್ರತೆ ಒದಗಿಸುವ ಸಲುವಾಗಿ ಜೀವನದ ಅನಿಶ್ಚಿತತೆಯ ಅಪಾಯದ ವಿರುದ್ಧ ವಿಮೆ ಮಾಡಿಸುವ ಪ್ರೀಮಿಯಂಗೆ ತೆರಿಗೆ ವಿಧಿಸಭಾರದು ಎಂದು ಒಕ್ಕೂಟ ಭಾವಿಸುತ್ತದೆ ಎಂದು ನಿತಿನ್ ಗಡ್ಕರಿ ಪತ್ರದಲ್ಲಿ ಹೇಳಿದ್ದಾರೆ.
ಜೀವ ವಿಮೆ ಮೂಲಕ ಉಳಿತಾಯದ ವಿಭಿನ್ನ ಚಿಕಿತ್ಸೆ, ಆರೋಗ್ಯ ವಿಮಾ ಕಂತುಗಳಿಗೆ ಆದಾಯ ತೆರಿಗೆ ವಿನಾಯಿತಿ ಮರು ಪರಿಚಯ ಮತ್ತು ಸಾರ್ವಜನಿಕ, ಪ್ರಾದೇಶಿಕ ಸಾಮಾನ್ಯ ವಿಮಾ ಕಂಪನಿಗಳ ಬಲವರ್ಧನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಒಕ್ಕೂಟದ ಪತ್ರದಲ್ಲಿ ಪ್ರಸ್ತಾಪಿಸಿದೆ. ಇದೇ ರೀತಿ ವೈದ್ಯಕೀಯ ವಿಮಾ ಕಂತುಗಳ ಮೇಲಿನ ಶೇ. 18ರಷ್ಟು ಜಿಎಸ್‌ಟಿಯು ಸಾಮಾಜಿಕವಾಗಿ ಅಗತ್ಯವಾಗಿರುವ ಈ ವಿಭಾಗದ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇವೆಲ್ಲಾ ಕಾರಣದಿಂದ ಜೀವ ಮತ್ತು ವೈದ್ಯಕೀಯ ವಿಮಾ ಪ್ರೀಮಿಯಂ ಮೇಲಿನ ಜಿಎಸ್‌ಟಿಯನ್ನು ಹಿಂಪಡೆಯುವ ಸಲಹೆಯನ್ನು ಆದ್ಯತೆಯ ಮೇರೆಗೆ ಪರಿಗಣಿಸಬೇಕೆಂದು ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ.