ಶುಲ್ಕ ಪಾವತಿಸದ ಟೆಲಿಕಾಂ ಕಂಪನಿಗಳಿಗೆ ಛೀಮಾರಿ ಹಾಕಿದ ಕೋರ್ಟ್..!

ನವದೆಹಲಿ:

     ದೇಶದ ಸಂವಹನ ಜಾಲದ ನರಮಂಡಲದಂತಿರುವ ಖಾಸಗಿ ದೂರಸಂಪರ್ಕ ಕಂಪನಿಗಳು ಸರ್ಕಾರಕ್ಕೆ ಇದುವರೆಗೂ  ಬರೋಬ್ಬರಿ 1.47 ಲಕ್ಷ ಕೋಟಿ ರೂಪಾಯಿ ಸರಿಹೊಂದಿಸಲ್ಪಟ್ಟ ಒಟ್ಟು ಆದಾಯ(ಎಜಿಆರ್ ಶುಲ್ಕ)ಪಾವತಿ ಮಾಡಬೇಕೆಂಬ ಆದೇಶವನ್ನು ಪಾಲಿಸದಿರುವ ಟೆಲ್ಕೊಸ್ ಮತ್ತು ಇತರ ಟೆಲಿಕಾಂ ಕಂಪೆನಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಏಕೆ ಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಪ್ರಶ್ನೆ ಮಾಡಿದೆ.

   ನ್ಯಾಯಾಲಯದ ಆದೇಶವನ್ನು ಪಾಲಿಸದ ಕಂಪೆನಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಸುಪ್ರೀಂ ಕೋರ್ಟ್ ಎಜಿಆರ್ ಶುಲ್ಕ ಪಾವತಿ ವಿಚಾರದಲ್ಲಿ ತನ್ನ ಆದೇಶಕ್ಕೆ ತಡೆಯೊಡ್ಡಿರುವ ದೂರಸಂಪರ್ಕ ಇಲಾಖೆಯ ಡೆಸ್ಕ್ ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

    ಇಂದು ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಎಸ್ ಅಬ್ದುಲ್ ನಜೀರ್ ಮತ್ತು ಎಂ ಆರ್ ಶಾ ಅವರನ್ನೊಳಗೊಂಡ ನ್ಯಾಯಪೀಠ, ಈ ಕೇಸಿನಲ್ಲಿ ಯಾರು ಅವಿವೇಕ ತೋರಿಸುತ್ತಿದ್ದಾರೆ ಎಂದು ಗೊತ್ತಿಲ್ಲ. ಈ ದೇಶದಲ್ಲಿ ಕಾನೂನು ಉಳಿದಿಲ್ಲವೇ, ಕಾನೂನು ಪಾಲಿಸದಿರುವವರು ಈ ದೇಶ ಬಿಟ್ಟು ಹೋಗುವುದು ಉತ್ತಮ ಎಂದು ಛೀಮಾರಿ ಹಾಕಿದೆ.

  ದೂರ ಸಂಪರ್ಕ ಇಲಾಖೆಯ ಡೆಸ್ಕ್ ಅಧಿಕಾರಿಯನ್ನು ಇಲ್ಲಿಗೆ ಕರೆಯಿರಿ, ಏನು ಸುಪ್ರೀಂ ಕೋರ್ಟ್ ಬಾಗಿಲು ಹಾಕಿಕೊಂಡು ಹೋಗಬೇಕು ಎಂದು ನೀವು ಭಾವಿಸಿದ್ದೀರಾ? ನಾವು ಎಲ್ಲರ ವಿರುದ್ಧ ನ್ಯಾಯಾಂಗ ನಿಂದನೆ ನೊಟೀಸ್ ಹೊರಡಿಸುತ್ತೇವೆ ಎಂದು ನ್ಯಾಯಾಧೀಶ ಮಿಶ್ರಾ ಕೋರ್ಟ್ ಹಾಲ್ ನಲ್ಲಿ ಆಕ್ರೋಶದಿಂದ ಹೇಳಿದರು.

   ಎಜಿಆರ್ ಶುಲ್ಕ ಪಾವತಿಸುವಂತೆ ಟೆಲ್ಕೊಸ್ ಮತ್ತು ಇತರ ಕಂಪೆನಿಗಳ ಮೇಲೆ ಒತ್ತಡ ಹೇರಬಾರದು ಮತ್ತು  ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳಬಾರದು ಎಂದು ಅಟೊರ್ನಿ ಜನರಲ್ ಮತ್ತು ಇತರ ಸಾಂವಿಧಾನಿಕ ಸಂಸ್ಥೆ ಅಧಿಕಾರಿಗಳಿಗೆ ದೂರ ಸಂಪರ್ಕ ಇಲಾಖೆಯ ಡೆಸ್ಕ್ ಆಫೀಸರ್ ಒಬ್ಬರು ಪತ್ರ ಬರೆಯುತ್ತಾರೆ ಎಂದರೆ ಏನರ್ಥ ಎಂದು ನ್ಯಾಯಾಧೀಶರು ಕೋಪದಿಂದ ಕೇಳಿದರು.

   ಟೆಲಿಕಾಂ ಕಂಪೆನಿಗಳ ಪರವಾನಗಿ ಶುಲ್ಕ ಮತ್ತು ಸ್ಪೆಕ್ಟ್ರಮ್ ಬಳಕೆ ಶುಲ್ಕ ಮತ್ತು ತೆರಿಗೆಗಳನ್ನು ಎಜಿಆರ್ ಮೂಲಕ ನಿರ್ಧರಿಸಲಾಗುತ್ತದೆ. ಎಜಿಆರ್ ರಚನೆ ಬಗ್ಗೆ ದೂರ ಸಂಪರ್ಕ ಇಲಾಖೆ ಮತ್ತು ಟೆಲಿಕಾಂ ಕಂಪೆನಿಗಳ ನಡುವಿನ 14 ವರ್ಷಗಳ ಕಾನೂನು ಹೋರಾಟಕ್ಕೆ ಕಳೆದ ವರ್ಷ ಅಕ್ಟೋಬರ್ 24ರಂದು ಸುಪ್ರೀಂ ಕೋರ್ಟ್ ಪೂರ್ಣವಿರಾಮ ನೀಡಿತ್ತು. 

     ಭಾರತೀಯ ದೂರ ಸಂಪರ್ಕ ಇಲಾಖೆಗೆ ಜಿಯೊ ಕಂಪೆನಿ ಮಾತ್ರ 60 ಸಾವಿರ ಕೋಟಿ ರೂಪಾಯಿ ಬಾಕಿ ಶುಲ್ಕವನ್ನು ಪಾವತಿ ಮಾಡಿದೆಯಷ್ಟೆ. ವೊಡಫೋನ್ ಐಡಿಯಾ 50 ಸಾವಿರ ಕೋಟಿ ರೂಪಾಯಿ, ಭಾರ್ತಿ ಏರ್ ಟೆಲ್ 35 ಸಾವಿರದ 586 ಕೋಟಿ ರೂ., ಮೊಬೈಲ್ ಸರ್ವಿಸ್ ಉದ್ಯಮವನ್ನು ಏರ್ ಟೆಲ್ ಗೆ ಮಾರಾಟ ಮಾಡಿದ ಟಾಟಾ ಟೆಲಿಸರ್ವಿಸಸ್ 14 ಸಾವಿರ ಕೋಟಿ ರೂಪಾಯಿ ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿವೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap