ನಿವೃತ್ತಿ ವಯಸ್ಸು ಹೆಚ್ಚಿಸಲು ಆರ್ಥಿಕ ಸಮೀಕ್ಷೆಯಲ್ಲಿ ಶಿಫಾರಸ್ಸು

ನವದೆಹಲಿ

      ದೇಶದಲ್ಲಿ ಪುರುಷರು ಹಾಗೂ ಮಹಿಳೆಯರ ಜೀವಿತಾವಧಿ ಹೆಚ್ಚುತ್ತಿರುವ ಕಾರಣ ಉದ್ಯೋಗಿಗಳ ನಿವೃತ್ತಿ ಹೊಂದುವ ವಯೋಮಿತಿಯನ್ನು ಹೆಚ್ಚಿಸಲು ಸರ್ಕಾರ ಪರಿಶೀಲಿಸಬೇಕು ಎಂದು ಲೋಕಸಭೆಯಲ್ಲಿ ಗುರುವಾರ ಮಂಡಿಸಲಾದ ಆರ್ಥಿಕ ಸಮೀಕ್ಷೆಯಲ್ಲಿ ಸಲಹೆ ನೀಡಲಾಗಿದೆ.

     ಕಾರ್ಯಸಾಧ್ಯತೆಯ ಪಿಂಚಣೆ ವ್ಯವಸ್ಥೆಗೆ ಇದು ಪ್ರಧಾನ ಅಂಶವಾಗಲಿದ್ದು, ಹಿರಿಯ ವಯಸ್ಸಿನ ಗುಂಪಿನೊಂದಿಗೆ ಮಹಿಳಾ ದುಡಿಮೆದಾರರು ಪಾಲ್ಗೊಳ್ಳುವಿಕೆ ಹೆಚ್ಚಿಸಲು ನೆರವಾಗಲಿದೆ ಎಂದು ಸಮೀಕ್ಷೆಯಲ್ಲಿ ಹೇಳಿದೆ

     ನಿವೃತ್ತಿ ವಯಸ್ಸಿನ ಹೆಚ್ಚಳ ಅನಿವಾರ್ಯವಾಗಿದೆ. ಈ ಬದಲಾವಣೆ ಒಂದು ದಶಕದ ಮುಂಚಿತವಾಗಿಯೇ ದೇಶದಲ್ಲಿ ಆರಂಭಗೊಂಡಿದೆ. ಈ ಬದಲಾವಣೆಗೆ ಉದ್ಯೋಗಿಗಳನ್ನು ಸಜ್ಜುಗೊಳಿಸಬೇಕಿದ್ದು, ಪಿಂಚಣೆ ಹಾಗೂ ಇತರ ನಿವೃತ್ತಿ ಸೌಲಭ್ಯಗಳನ್ನು ಮೊದಲೇ ಅಂದಾಜಿಸಿ ಯೋಜಿಸಲು ನೆರವಾಗಲಿದೆ ಎಂದು ತಿಳಿಸಿದೆ.ಭಾರತದಲ್ಲಿ ಉದ್ಯೋಗಿಗಳ ನಿವೃತ್ತಿಯ ವಯಸ್ಸು 60 ವರ್ಷಗಳೆಂದು ನಿಗದಿಪಡಿಸಲಾಗಿದೆ.

     ಜರ್ಮನಿ, ಫ್ರಾನ್ಸ್ ಹಾಗೂ ಅಮೆರಿಕಾ ತಮ್ಮ ಉದ್ಯೋಗಿಗಳ ನಿವೃತ್ತಿಯ ವಯಸ್ಸನ್ನು ಹೆಚ್ಚಳಗೊಳಿಸುತ್ತಲೇ ಇವೆ.
ಇಂಗ್ಲೆಂಡ್ ನಲ್ಲಿ ಮಹಿಳೆ , ಪುರುಷರ ಪಿಂಚಣಿ ವಯಸ್ಸನ್ನು 2020ರ ವೇಳೆಗೆ 66 ವರ್ಷಗಳಿಗೆ ನಿಗದಿಪಡಿಸಲಾಗಿದೆ.
ಯುಕೆ ಸರ್ಕಾರ 2026-28ರ ವೇಳೆಗೆ ನಿವೃತ್ತಿ ವಯಸ್ಸನ್ನು 67ಕ್ಕೆ, 2044- 46ರ ವೇಳೆಗೆ 68ಕ್ಕೆ ಹೆಚ್ಚಿಸಲು ಯೋಜಿಸಿದೆ.

   ಜಪಾನ್ ತನ್ನ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು 70ಕ್ಕೆ ಹೆಚ್ಚಿಸಲು ಯೋಜಿಸಿದ್ದು, ಚೈನಾ ಪ್ರತಿಮೂರು ವರ್ಷಗಳಿಗೊಮ್ಮೆ ಮಹಿಳೆಯರ ನಿವೃತ್ತಿ ವಯಸ್ಸನ್ನು 1 ವರ್ಷ, ಪುರುಷರಿಗೆ ಪ್ರತಿ ಆರು ವರ್ಷಗಳಿಗೊಮ್ಮೆ 1 ವರ್ಷ ಹೆಚ್ಚಿಸುವ ಪ್ರಸ್ತಾವನೆ ಹೊಂದಿದ್ದು , 2045ರ ವೇಳೆಗೆ ಮಹಿಳಾ ಮತ್ತು ಪುರುಷರ ನಿವೃತ್ತಿ ವಯಸ್ಸು 65 ಆಗಲಿದೆ.

     ಜರ್ಮನಿಯಲ್ಲಿ ನಿವೃತ್ತಿಯ ವಯಸ್ಸನ್ನು 2023ರ ವೇಳೆಗೆ 66 ವರ್ಷಗಳಿಗೆ ಹಾಗೂ 2029ರ ವೇಳೆಗೆ 67 ವರ್ಷಕ್ಕೆ ಹೆಚ್ಚಿಸಲು ಲೆಕ್ಕಾಚಾರ ಹಾಕಲಾಗಿದೆ.ಅಮೆರಿಕಾದಲ್ಲಿ 1960 ಅಥವಾ ನಂತರದಲ್ಲಿ ಜನಿಸಿದವರ ಪಿಂಚಣಿ ಪಡೆಯುವ ವಯಸ್ಸನ್ನು 67 ವರ್ಷಕ್ಕೆ ಹೆಚ್ಚಿಸಲು ಮುಂದಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ