ತಿರುಮಲ
ತಿರುಪತಿ ತಿಮ್ಮಪ್ಪನ ಹುಂಡಿಗೆ ಕಳೆದ ಜೂನ್ ತಿಂಗಳಲ್ಲಿ ದಾಖಲೆಯ 100 ಕೋಟಿ ರೂ ಸಂಗ್ರಹವಾಗಿದೆ, ಜೊತೆಗೆ 24.66 ಲಕ್ಷ ಭಕ್ತಾದಿಗಳು ಸ್ವಾಮಿಯ ದರ್ಶನ ಪಡೆದುಕೊಂಡಿದ್ದಾರೆ.
2019ರ ಜೂನ್ ತಿಂಗಳು ಕಳೆದ ವರ್ಷದ ಜೂನ್ ಮಾಸಕ್ಕೆ ಹೋಲಿಸಿದರೆ ಲಡ್ಡು ವಿತರಣೆ, ಅನ್ನ ಪ್ರಸಾದ ವಿತರಣೆ, ಮುಡಿ ಕೊಟ್ಟವರ ಸಂಖ್ಯೆ ಸೇರಿದಂತೆ ಎಲ್ಲಾ ರೀತಿಯಲ್ಲೂ ಹೊಸ ದಾಖಲೆನಿರ್ಮಿಸಿದೆ.
ಕಳೆದ ವರ್ಷ ಜೂನ್ ತಿಂಗಳಲ್ಲಿ 24.10 ಲಕ್ಷ ಭಕ್ತಾಧಿಗಳು ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದರು. ಈ ವರ್ಷ ಹೆಚ್ಚುವರಿಯಾಗಿ 2.56ಲಕ್ಷ ಭಕ್ತಾಧಿಗಳು ದೇವರ ದರ್ಶನ ಪಡೆದುಕೊಂಡಿದ್ದಾರೆ. ಕಳೆದ ವರ್ಷದ ಜೂನ್ ತಿಂಗಳಲ್ಲಿ ಶ್ರಿವಾರಿ ಹುಂಡಿಯಲ್ಲಿ 91.81 ಕೋಟಿರೂಪಾಯಿ ಸಂಗ್ರಹವಾಗಿತ್ತು. ಈ ವರ್ಷ 100.37 ಕೋಟಿ ರೂಪಾಯಿ ದಾಖಲೆಯ ಹಣ ಸಂಗ್ರಹವಾಗಿದೆ.
ಕಳೆದ ವರ್ಷದ ಜೂನ್ ನಲ್ಲಿ 64.05 ಲಕ್ಷ ಭಕ್ತಾದಿಗಳಿಗೆ ಅನ್ನ ಪ್ರಸಾದ ವಿತರಿಸಲಾಗಿತ್ತು. ಈ ವರ್ಷ 71.02 ಲಕ್ಷ ಭಕ್ತಾಧಿಗಳಿಗೆ ಅನ್ನ ಪ್ರಸಾದ ವಿತರಿಸಲಾಗಿದೆ.
ಕಳೆದ ವರ್ಷ ಜೂನ್ ತಿಂಗಳಲ್ಲಿ ಭಕ್ತಾಧಿಗಳಿಗೆ ಸುಮಾರು 95.58 ಲಕ್ಷ ಲಡ್ಡುಗಳನ್ನು ವಿತರಿಸಲಾಗಿತ್ತು. ಈ ವರ್ಷ 1.13 ಕೋಟಿ ಲಡ್ಡುಗಳನ್ನು ವಿತರಿಸಲಾಗಿದೆ. ಈ ವರ್ಷದ ಜೂನ್ ನಲ್ಲಿ 12.88 ಲಕ್ಷ ಮಂದಿ ತಿಮ್ಮಪ್ಪನಿಗೆ ಮುಡಿನೀಡಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 11.90ಲಕ್ಷ ಮುಂದಿ ಮುಡಿ ನೀಡಿದ್ದರು ಎಂದು ಅಧಿಕಾರಿಗಳು ಅಂಕಿ ಅಂಶನೀಡಿದ್ದಾರೆ.ಈ ವರ್ಷ ದೇಗುಲ ಮಂಡಳಿಯ ವಸತಿಗಳಲ್ಲಿ ಯಾತ್ರಾರ್ಥಿಗಳು ಶೇ 107ರಷ್ಟು ವಾಸ್ತವ್ಯ ಹೂಡಿದ್ದರು, ಕಳೆದ ವರ್ಷ ಶೇ. 106ರಷ್ಟು ಟಿಟಿಡಿ ವಸತಿಯನ್ನು ಬಳಸಿಕೊಂಡಿದ್ದರು.