ನವದೆಹಲಿ:
ವಿಶ್ವದಲ್ಲಿ ತನ್ನ ಕರಾಳ ರೂಪವನ್ನು ತೋರುತ್ತಿರುವ ಕೊರೋನಾ ವೈರಸ್ ಅನ್ನು ಹತ್ತಿಕ್ಕಲು ಇಡೀ ವಿಶ್ವವೇ ಒಗ್ಗಟ್ಟಾಗಿ ನಿಂತಿದ್ದು, ಈ ನಡುವಲ್ಲೇ ವೈರಸ್ ಚಿಕಿತ್ಸೆಗಾಗಿ ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಕೆ ಮಾಡಲಾಗುತ್ತಿದೆ. ಹೀಗಾಗಿ ಈ ಔಷಧಿಗಾಗಿ ಎಲ್ಲೆಡೆ ಬೇಡಿಕೆಗಳು ಹೆಚ್ಚಾಗಿದ್ದು, ಭಾರತ ಮಿತ್ರ ರಾಷ್ಟ್ರಗಳಿಗೆ ಸಹಾಯ ಮಾಡಲು ನಾವು ಸಿದ್ಧವಿದ್ದೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ಸಾಂಕ್ರಾಮಿಕ ರೋಗದ ವಿರುದ್ಧ ನಾವೆಲ್ಲರೂ ಒಗ್ಗೂಡಿ ಹೋರಾಟ ನಡೆಸಬೇಕಿದೆ. ಮಿತ್ರ ರಾಷ್ಟ್ರಗಳಿಗೆ ಸಾಧ್ಯವಾದಷ್ಟು ಮಟ್ಟಿಗೆ ಸಹಾಯ ಮಾಡಲು ಭಾರತದ ಸಿದ್ಧವಿದೆ. ಇಸ್ರೇಲ್’ನಲ್ಲಿರುವ ಎಲ್ಲರೂ ಉತ್ತಮ ಆರೋಗ್ಯ ಹೊಂದಲಿ ಎಂದು ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ.
ಇಸ್ರೇಲ್ ರಾಷ್ಟ್ರಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ನೀಡುವುದಾಗಿ ಭಾರತದ ಹೇಳಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ್ದ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತಾನ್ಯಾಹು ಅವರು, ಇಸ್ರೇಲ್ ರಾಷ್ಟ್ರಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ಮಾಡಿದ್ದಕ್ಕೆ ಭಾರತದ ಪ್ರಧಾನಮಂತ್ರಿ ಹಾಗೂ ನನ್ನ ಸ್ನೇಹಿತ ನರೇಂದ್ರ ಮೋದಿಯವರಿಗೆ ಧನ್ಯವಾದಗಳು. ಇಸ್ರೇಲ್ ರಾಷ್ಟ್ರದ ಪ್ರತೀ ಪ್ರಜೆಗಳೂ ನಿಮಗೆ ಧನ್ಯವಾದಗಳನ್ನು ಹೇಳಲು ಬಯಸುತ್ತಾರೆಂದು ಟ್ವೀಟ್ ಮಾಡಿದ್ದರು.
