ಫತೆಘಡ್
ಇಲ್ಲಿನ ಪೊಲೀಸರು ಭಾನುವಾರ 8.5 ಕೋಟಿ ರೂ ಮೌಲ್ಯದ 25 ಕೆಜಿ ಚಿನ್ನ ವಶಪಡಿಸಿಕೊಂಡಿದ್ದಾರೆ.ಶನಿವಾರ ರಾತ್ರಿ ಫ್ಲೈಯಿಂಗ್ ಸ್ಕಾಡ್ ತಂಡ ಮತ್ತು ಸ್ಥಳೀಯ ಪೊಲೀಸರು ಜಿಟಿ ರಸ್ತೆಯ ಸರ್ಹಿಂದ್ ಠಾಣೆ ಸಮೀಪದ ತಪಾಸಣಾ ಕೇಂದ್ರದಲ್ಲಿ ದಿಲ್ಲಿ ಕಡೆಯಿಂದ ಬರುತ್ತಿದ್ದ ಖಾಸಗಿ ವ್ಯಾನ್ನಿಂದ ಈ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಈ ಪ್ರಕರಣದ ಕುರಿತು ಆದಾಯ ತೆರಿಗೆ ಇಲಾಖೆ ಮಾಹಿತಿ ರವಾನಿಸಿದ್ದೇವೆ ಎಂದು ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸರು ತಿಳಿಸಿದ್ದಾರೆ.
ವಾಹನದಲ್ಲಿ 4 ಜನರಿದ್ದು ಅದರಲ್ಲಿ ಇಬ್ಬರು ಖಾಸಗಿ ಭದ್ರತಾ ಸಿಬ್ಬಂದಿ. ಓರ್ವ ಕ್ಯಾಶಿಯರ್ ಮತ್ತು ಚಾಲಕ ಇದ್ದರು. ಲಭಿಸಿರುವ ದಾಖಲೆಗಳ ಅನ್ವಯ ಹರಿದ್ವಾರದಿಂದ ಅಮೃತ್ಸರ್ಗೆ ನೀಡಲು ಚಿನ್ನವನ್ನು ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಕ್ಯಾಶಿಯರ್ ನೀಡಿದ ಹೇಳಿಕೆಯಂತೆ ಲುಧಿಯಾನದ ಆಭರಣದ ಅಂಗಡಿಗೆ ನೀಡಲು ಚಿನ್ನವನ್ನು ತೆಗೆದುಕೊಂಡು ಹೋಗಲಾಗುತ್ತಿತ್ತು. ದಾಖಲೆಯಲ್ಲಿನ ವಾಹನ ಸಂಖ್ಯೆ ಮತ್ತು ಚಿನ್ನ ತೆಗೆದುಕೊಂಡು ಹೋಗುತ್ತಿದ್ದ ವಾಹನದ ಸಂಖ್ಯೆ ಹೋಲುತ್ತಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.