ಬೆಂಗಳೂರು
ಲೋಕಸಭೆ ಚುನಾವಣೆ 2024ರ ವೇಳಾಪಟ್ಟಿ ಘೋಷಣೆಯಾಗಿದೆ. ಕರ್ನಾಟಕ 28 ಕ್ಷೇತ್ರಗಳಿಗೆ ಏಪ್ರಿಲ್ 26 ಮತ್ತು ಮೇ 7ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಜೂನ್ 4ರಂದು ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.
ಮಾರ್ಚ್ 16ರಂದು ಚುನಾವಣೆ ವೇಳಾಪಟ್ಟಿ ಘೋಷಣೆಯಾಗುತ್ತಿದ್ದಂತೆಯೇ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಹಣದ ವಹಿವಾಟಿನ ಮೇಲೆ ಆಯೋಗ ನಿಗಾ ವಹಿಸಿದೆ.
ಈಗಾಗಲೇ ಜಿಲ್ಲಾ ಚುನಾವಣಾಧಿಕಾರಿಗಳು ಬ್ಯಾಂಕ್‌ಗಳ ಜೊತೆ ಸಭೆಯನ್ನು ನಡೆಸಿ ಅನುಮಾನಸ್ಪದವಾಗಿ ನಡೆಯುವ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಲು ಮನವಿ ಮಾಡಿದ್ದಾರೆ. ಡಿಜಿಟಲ್ ವಹಿವಾಟು ಮೇಲೆಯೂ ಸಹ ಗಮನ ನೀಡಲಾಗುತ್ತದೆ.
ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಹಿನ್ನಲೆಯಲ್ಲಿ ಚೆಕ್ ಪೋಸ್ಟ್‌ಗಳನ್ನು ಸ್ಥಾಪನೆ ಮಾಡಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಿ, ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ, ವಾಹನಗಳ ತಪಾಸಣೆಯನ್ನು ನಡೆಸುವ ಮೂಲಕ ಹಣವ ವಹಿವಾಟಿನ ಮೇಲೆ ನಿಗಾ ಇಡಲಾಗಿದೆ.
ಆದರೆ ಡಿಜಿಟಲ್ ಪೇಮೆಂಟ್ ಮೂಲಕ ಮತದಾರರರಿಗೆ ಆಮಿಷ ಒಡ್ಡಿದರೆ ಅದನ್ನು ಪತ್ತೆ ಹಚ್ಚಲು ಬ್ಯಾಂಕ್‌ಗಳ ಸಹಾಯ ಬೇಕು. ಇದಕ್ಕಾಗಿ ಚುನಾವಣಾಧಿಕಾರಿಗಳು ಬ್ಯಾಂಕ್ ಸಿಬ್ಬಂದಿಗಳ ಜೊತೆ ಮಾತುಕತೆ ನಡೆಸಿದ್ದಾರೆ.ಡಿಜಿಟಲ್ ವಹಿವಾಟಿಗೆ ಸಹ ನಿಯಮಗಳನ್ನು ರೂಪಿಸಲಾಗಿದೆ. ಯಾವುದೇ ವ್ಯಕ್ತಿ 20 ಜನರ ಖಾತೆಗೆ ಹಣ ವರ್ಗಾವಣೆ ಮಾಡಿದ್ದರೆ ಅದನ್ನು ಸಂಶಯಾಸ್ಪದ ವಹಿವಾಟು ಎಂದು ಪರಿಗಣಸಬೇಕು ಎಂಬ ನಿಯಮವಿದೆ.
ಬ್ಯಾಂಕುಗಳಿಂದ ಪ್ರತಿ ದಿನ ವಹಿವಾಟುಗಳ ವಿವರ ಪಡೆದು ಅದರಲ್ಲಿ ಸಂಶಯಾಸ್ಪದ ವಹಿವಾಟುಗಳು ಕಂಡುಬಂದರೆ ಅಂತಹವರ ಮೇಲೆ ಕಣ್ಣಿಡಲಾಗುತ್ತದೆ. ಇದಕ್ಕೆ ಬ್ಯಾಂಕ್‌ಗಳ ಸಹಕಾರ ಮುಖ್ಯವಾಗಿದೆ.
ಚುನಾವಣಾ ವಿಭಾಗದ ವಿಶೇಷ ಆಯುಕ್ತ ಸೆಲ್ವಮಣಿ ಮಾತನಾಡಿ, “ಬ್ಯಾಂಕ್‌ಗಳಿಂದ ಎಟಿಎಂಗೆ ನಗದು ಸಾಗಣೆ ಮಾಡುವ ಸಿಬ್ಬಂದಿಗಳು ಸರಿಯಾದ ದಾಖಲೆ ಇಟ್ಟುಕೊಂಡು ಚುನಾವಣಾ ಆಯೋಗದ ನಿಯಮಗಳ ಅನುಸಾರ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹಣ ಸಾಗಣೆ ಮಾಡಬೇಕು. ಸರಿಯಾದ ದಾಖಲೆಗಳು ಇಲ್ಲವಾದಲ್ಲಿ ಹಣ ಜಪ್ತಿ ಮಾಡಲಾಗುತ್ತದೆ” ಎಂದು ಹೇಳಿದ್ದಾರೆ.
ಎಲ್ಲಾ ಬ್ಯಾಂಕ್‌ಗಳಿಗೆ ಚುನಾವಣೆ ಕಾರ್ಯಕ್ಕಾಗಿಯೇ ನೋಡೆಲ್ ಅಧಿಕಾರಿ ನೇಮಕ ಮಾಡಲಾಗಿದೆ. ಒಂದೇ ಖಾತೆಯಿಂದ ಸುಮಾರು ಖಾತೆಗಳಿಗೆ ಹಣ ವರ್ಗಾವಣೆಗೊಂಡರೆ ಅದರ ಮಾಹಿತಿಯನ್ನು ಅಧಿಕಾರಿಗಳು ಆಯೋಗದ ಸಿಬ್ಬಂದಿ ಜೊತೆಗೆ ಹಂಚಿಕೊಳ್ಳಬೇಕು. ಇದನ್ನು ಪರಿಶೀಲಿಸಿ ಆಯೋಗ ಕ್ರಮಗಳನ್ನು ಕೈಗೊಳ್ಳುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ