ಸುಳ್ಯ:
ಸ್ವಚ್ಚ ಭಾರತ ಅಡಿಯಲ್ಲಿ ದೇಶದ ಎಲ್ಲಾ ನಗರಗಳನ್ನು ಸ್ವಚ್ಚವಾಗಿರಿಸುವ ಉದ್ದೇಶದಿಂದ ಜಿಲ್ಲಾಡಳಿತಗಳು ಕೆಲಸ ಮಾಡುತ್ತಿದ್ದು ರಸ್ತೆ ಬದಿಯಲ್ಲಿ ಕಸ ಎಸೆದರೆ ದಂಡ ವಿಧಿಸುವುದನ್ನು ಜಾರಿಗೊಳಿಸಿದ್ದಾರೆ ಇದನ್ನು ಮೀರಿ ಕಸ ೆಸೆಯಯುವವರ ಸಂಖ್ಯೆಯೇನು ಕಡಿಮೆಯಾಗಿಲ್ಲ ಇದಕ್ಕೆ ತಾಜಾ ಉದಾಹರಣೆ ವಿದ್ಯಾರ್ಥಿಯೊಬ್ಬನಿಗೆ ಪಂಚಾಯತ್ 1,000 ರೂ. ದಂಡ ವಿಧಿಸಿದ ಘಟನೆ ಸುಳ್ಯದಲ್ಲಿ ವರದಿಯಾಗಿದೆ.
ನಿನ್ನೆ ಬೆಳಗ್ಗೆ ನಗರದ ಲೋಕೋಪಯೋಗಿ ಇಲಾಖೆ ಹಳೆ ಕಚೇರಿ ಬಳಿ ಕಸದ ಕಟ್ಟೊಂದು ಕಂಡುಬಂದಿತ್ತು. ಈ ಸ್ಥಳದಲ್ಲಿ ಕಸ ಹಾಕಬಾರದು ಎಂಬ ನಾಮಫಲಕ ಇದ್ದರೂ ಅದಕ್ಕೆ ಸ್ಪಂದನೆ ದೊರಕದ ಕಾರಣ ಎರಡು ಸಿಸಿ ಕೆಮರಾ ಅಳವಡಿಸಲಾಗಿತ್ತು. ಕಸದ ಕಟ್ಟು ಕಂಡಾಕ್ಷಣ ಅಧಿಕಾರಿಗಳು ಕೆಮರಾ ಪರಿಶೀಲಿಸಿದರು. ಅದರಲ್ಲಿ ಬೈಕ್ ನಲ್ಲಿ ಬಂದ ವ್ಯಕ್ತಿಯೋರ್ವ ಕಸ ಎಸೆಯುತ್ತಿರುವ ದೃಶ್ಯ ಸೆರೆಯಾಗಿತ್ತು. ಪರಿಶೀಲನೆ ನಡೆಸಿದಾಗ ಕಸ ಎಸೆದ ವ್ಯಕ್ತಿಯ ಗುರುತು ಪತ್ತೆಯಾಯಿತು.
ಆತ ಪದವಿ ಓದುತ್ತಿರುವ ವಿದ್ಯಾರ್ಥಿ ಆಗಿದ್ದು ಬಾಡಿಗೆ ಕೊಠಡಿಯಲ್ಲಿ ಇರುವುದಾಗಿ ಖಚಿತಪಡಿಸಿಕೊಂಡ ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಿದರು. ಆಗ ವಿದ್ಯಾರ್ಥಿ ಅಲ್ಲಿರಲಿಲ್ಲ. ಕೊನೆಗೆ ಕೊಠಡಿಗೆ ಬೀಗ ಜಡಿದು ಈ ವಿದ್ಯಾರ್ಥಿ ನ.ಪಂ.ಗೆ ಬರುವಂತೆ ಮಾಲಕರಿಗೆ ತಿಳಿಸಿದರು. ವಿಷಯ ತಿಳಿದು ನ.ಪಂ.ಗೆ ಬಂದ ವಿದ್ಯಾರ್ಥಿಗೆ 1,000 ರೂ. ದಂಡ ವಿಧಿಸಿ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.
