ಬೆಂಗಳೂರು:
ಜ್ಞಾನ, ವಿಜ್ಞಾನ, ಕೌಶಲ್ಯದ ಜೊತೆಗೆ ಮಾನವೀಯ ಮೌಲ್ಯಗಳು, ಸಂಸ್ಕೃತಿ, ಮತ್ತು ಸಂಸ್ಕಾರವನ್ನು ನೀಡುವ ಸಮಗ್ರ ಶಿಕ್ಷಣದ ಅಗತ್ಯವಿದೆ. ಅದನ್ನು ರಾಷ್ಟ್ರೀಯ ಶಿಕ್ಷಣ ನೀತಿ-2020 ಪೂರೈಸುತ್ತದೆ ಎನ್ನುವ ಸಂಪೂರ್ಣ ವಿಶ್ವಾಸವಿದೆ. ರಾಜ್ಯದaಲ್ಲಿ ಮುಂದಿನ ವರ್ಷದಿಂದ ಎನ್‍ಇಪಿ ಅನುಷ್ಠಾನಗೊಳಿಸಲು ಯೋಚಿಸಿ ಶಿಕ್ಷಣ ತಜ್ಞರ ಕಾರ್ಯಪಡೆ ರಚಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ಸಹಯೋಗದಲ್ಲಿ ಬೆಂಗಳೂರಿನ ಜಯನಗರದಲ್ಲಿ ಆರ್.ವಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನವನ್ನು ಉದ್ಘಾಟಿಸಿ ಸಚಿವ ಬಿ.ಸಿ. ನಾಗೇಶ್ ಮಾತನಾಡಿದರು.
ದೇಶದಲ್ಲಿ ಸಾಕ್ಷರರ ಪ್ರಮಾಣ ಏರಿಕೆ
ಎಲ್ಲರಿಗೂ ಶಿಕ್ಷಣ ನೀಡುವುದರಿಂದ ದೇಶದಲ್ಲಿ ಜಾತಿ ವ್ಯವಸ್ಥೆ, ತಾರತಮ್ಯ ಹೋಗಲಾಡಿಸಬಹುದು ಎಂದು ದಶಕಗಳಿಂದ ಹೇಳಿಕೊಂಡು ಬಂದಿದ್ದೇವೆ. ಅದಕ್ಕಾಗಿ ದೇಶದ ಪ್ರತಿಯೊಬ್ಬ ಪ್ರಜೆಗೆ ಅಕ್ಷರ ಜ್ಞಾನ, ಶಿಕ್ಷಣ ನೀಡುವ ಸರ್ವ ಪ್ರಯತ್ನಗಳು ನಡೆಯುತ್ತಲೇ ಇವೆ. ಸರ್ಕಾರಗಳ ಪ್ರಯತ್ನದ ಫಲವಾಗಿ ದೇಶದಲ್ಲಿ ಸಾಕ್ಷರರ ಪ್ರಮಾಣ ಏರಿಕೆಯಾಯಿತು ಎಂದರು.
ಮೌಲ್ಯಯುತ ಶಿಕ್ಷಣ ಅಗತ್ಯ
ಸಮ ಸಮಾಜ ನಿರ್ಮಾಣದ ಕನಸುಗಳು, ಉದ್ದೇಶಗಳು ಸಾಕಷ್ಟು ವರ್ಷಗಳ ಕಾಲ ಈಡೇರಿದವು. ಆದರೆ, ಇತ್ತೀಚಿನ ವರ್ಷಗಳಲ್ಲಿ ವಿಜ್ಞಾನ, ತಂತ್ರಜ್ಞಾನದ ವೇಗದ ಬೆಳವಣಿಗೆ, ಯಂತ್ರೋಪಕರಣಗಳ ಬಳಕೆಯಿಂದ ಜನರಿಗೆ ಐಷಾರಾಮಿ ಜೀವನ ಸಿಗುತ್ತಿದೆ. ಜನರ ಶ್ರಮ ಕಡಿಮೆಯಾಗುತ್ತಿದೆ. ದುರಾದಷ್ಟವಷಾತ್ ಈ ಐಷಾರಾಮಿ ವ್ಯವಸ್ಥೆಯು ವ್ಯಕ್ತಿ, ವ್ಯಕ್ತಿಗಳನ್ನು ದೂರ ಮಾಡುತ್ತಿದೆ. ಸಮಾಜದಲ್ಲಿ ಸಾಕಷ್ಟು ಅನಾಹುತಗಳು ಸಂಭವಿಸುತ್ತಿವೆ. ಸಂಸ್ಕಾರ, ಸಂಸ್ಕೃತಿ, ಮಾನವೀಯ ಮೌಲ್ಯಗಳನ್ನು ಮರೆತಿರುವ ಕಾರಣ ನಮ್ಮ ಸಮಾಜದಲ್ಲಿ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಇದರಿಂದ ಹೊರ ಬರಬೇಕಾದರೆ ಶಿಕ್ಷಣದಲ್ಲಿ ಸಂಸ್ಕೃತಿ, ಸಂಸ್ಕಾರ, ಮೌಲ್ಯಗಳು, ಪರಸ್ಪರರ ನಡುವೆ ಗೌರವ ಭಾವನೆಯ ಅಗತ್ಯತೆ ಇದೆ ಎಂದು ಸಚಿವರು ನುಡಿದರು.
ಸ್ವಾಭಿಮಾನಿಗಳನ್ನು ಸೃಷ್ಟಿಸುವ ಶಿಕ್ಷಣ ಅಗತ್ಯ
ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣ ಅತ್ಯಗತ್ಯ. ಎಲ್ಲರಿಗೂ ಶಿಕ್ಷಣ ನೀಡಬೇಕು. ಜನರ ಅಗತ್ಯತೆಗಳಿಗೆ ತಕ್ಕಂತೆ ಶಿಕ್ಷಣ ನೀಡಬೇಕು. ಆರೋಗ್ಯಕರ ಸಮಾಜ ನಿರ್ಮಾಣವಾಗಬೇಕು. ಶಿಕ್ಷಣದಿಂದ ಸಾಮಾಜಿಕ ಕಳಕಳಿ ಬರಬೇಕು. ಆರೋಗ್ಯಕರ ಸಮಾಜದ ಮೂಲಕ ಸ್ವಾಭಿಮಾನಿ ವ್ಯಕ್ತಿಗಳನ್ನು ಸೃಷ್ಟಿಸುವ ಶಿಕ್ಷಣ ನೀತಿ ಭಾರತಕ್ಕೆ ಅಗತ್ಯವಿದೆ ಎಂದು ಜನಸಂಘದ ನೇತಾರ, ಶಿಕ್ಷಣ ತಜ್ಞ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿಯವರು ದಶಕಗಳ ಹಿಂದೆಯೇ ಹೇಳಿದ್ದರು ಎಂದು ಸಚಿವರು ನುಡಿದರು.
ಒಂದು ದಿನದ ಸಮ್ಮೇಳನದಲ್ಲಿ ರಾಜ್ಯದ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಿಡಿಪಿಐಗಳು, ಡಯಟ್ ಪ್ರಾಂಶುಪಾಲರು, ಪದವಿಪೂರ್ವ ಇಲಾಖೆಯ ಉಪ ನಿರ್ದೇಶಕರು, ನಿರ್ದೇಶಕರು ಮತ್ತು ರಾಜ್ಯ ಕಚೇರಿ ಅಧಿಕಾರಿಗಳು ಸೇರಿ 400ಕ್ಕೂ ಹೆಚ್ಚು ಅಧಿಕಾರಿಗಳು ಭಾಗವಹಿಸಿದ್ದರು.
ಶಿಕ್ಷಣ ತಜ್ಞರಾದ ಎಂ.ಕೆ. ಶ್ರೀಧರ್, ಡಾ. ಗುರುರಾಜ ಕರಜಗಿ, ಅಜೀಂ ಪ್ರೇಮ್ ಜೀ ವಿಶ್ವವಿದ್ಯಾಲಯದ ಪೆÇ್ರ. ಹೃಷಿಕೇಶ್ ಮತ್ತು ಶಿಕ್ಷಣ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ. ಎಚ್.ಬಿ ಚಂದ್ರಶೇಖರ್ ಅವರು ವಿವಿಧ ಅವಧಿಗಳಲ್ಲಿ ಎನ್‍ಇಪಿ ಕುರಿತು ವಿಷಯ ಮಂಡಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಸೆಲ್ವ ಕುಮಾರ್ ಸೇರಿದಂತೆ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು, ಶಿಕ್ಷಣ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು.
ವಿಶ್ವಗುರುವತ್ತ ನೂತನ ಶಿಕ್ಷಣ ನೀತಿ
ರಾಷ್ಟ್ರೀಯ ಭಾವನೆ, ಭಾರತದ ಬಗ್ಗೆ ಗೌರವ, ದೇಶವನ್ನು ವಿಶ್ವಗುರು ಮಾಡುವ ಶಿಕ್ಷಣ ರಾಷ್ಟ್ರೀಯ ಶಿಕ್ಷಣ ನೀತಿ ಒಳಗೊಂಡಿರಬೇಕು ಎಂದು ಶ್ಯಾಮ್ ಪ್ರಸಾದ್ ಮುಖರ್ಜಿ ಹೇಳಿದ್ದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕೂಡ ಅದನ್ನೇ ಹೇಳಿದ್ದರು. ಸಂಸ್ಕೃತಿ ಮತ್ತು ವಿಜ್ಞಾನದ ಸಮನ್ವಯತೆಯ ಶಿಕ್ಷಣ ನೀಡುವುದು ಅತ್ಯಂತ ಅಗತ್ಯವಿದೆ. ಎನ್‍ಇಪಿ-2020 ಈ ಎಲ್ಲ ಗುರಿ, ಉದ್ದೇಶಗಳನ್ನು ಒಳಗೊಂಡಿದೆ ಎಂದು ಸಚಿವ ಬಿ.ಸಿ.ನಾಗೇಶ್ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ