ಆಂತರಿಕ ದಂಗೆ : ವ್ಯಾಗ್ನರ್‌ ಮುಖ್ಯಸ್ಥನ ಬಂಧನಕ್ಕೆ ಆದೇಶ…!

ಮಾಸ್ಕೋ: 

     ತನ್ನ ದೇಶದ ಸೇನೆಯ ವಿರುದ್ಧ ಸಶಸ್ತ್ರ ದಂಗೆಗೆ ಕರೆ ನೀಡಿದ ನಂತರ ಪ್ರಬಲ ಸೇನಾ ಪಡೆಯ ವ್ಯಾಗ್ನರ್‌ನ ಮುಖ್ಯಸ್ಥನನ್ನು ಬಂಧಿಸಲು ರಷ್ಯಾ ಆದೇಶಿಸಿದೆ. ಇಷ್ಟಕ್ಕೂ ದೇಶದ ಆಡಳಿತಕ್ಕೆ ವಿದೇಯವಾಗಿರುವ ಸೇನೆಯ ನಾಯಕ  ಪ್ರಿಗೊಜಿನ್ ಬಂಡಾಯವೆದ್ದಿದ್ದೇಕೆ ಎಂಬ ಪ್ರಶ್ನೆ ಮೂಡುತ್ತಿದೆ.

    ಉಕ್ರೇನ್ ವಿರುದ್ಧ ದೀರ್ಘ ಕಾಲದಿಂದ ಯುದ್ಧ ನಡೆಸುತ್ತಿರುವ ರಷ್ಯಾಕ್ಕೀಗ (Russia) ದೇಶದ ಒಳಗೇ ದಂಗೆಯ ಬಿಸಿ ತಟ್ಟತೊಡಗಿದೆ. ರಷ್ಯಾದ ವ್ಯಾಗ್ನರ್ ಗುಂಪಿನ (ಅರೆಸೇನಾ ಮಾದರಿಯಲ್ಲಿ ಸೇನೆಯ ಪರವಾಗಿ ಕಾರ್ಯನಿರ್ವಹಿಸುವ ಖಾಸಗಿ ಮಿಲಿಟರಿ ಕಂಪನಿ) ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ರಕ್ಷಣಾ ಸಚಿವಾಲಯದ ವಿರುದ್ಧ ಬಂಡಾಯವೆದ್ದಿದ್ದಾರೆ. 

     ರಷ್ಟಾದ ಪ್ರಬಲ ಖಾಸಗಿ ಸೇನೆ ವ್ಯಾಗ್ನರ್ ಗುಂಪಿನ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್ ಪುಟಿನ್‌ ನಾಯಕತ್ವವನ್ನು ಉರುಳಿಸುವುದಾಗಿ ಪ್ರತಿಜ್ಞೆ ಮಾಡಿದ ನಂತರ ರಾಜಧಾನಿ ಮಾಸ್ಕೋ ಸೇರಿದಂತೆ ರಷ್ಯಾದ ಹಲವಾರು ಪ್ರಮುಖ ನಗರಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಮಾಸ್ಕೋ ಮೇಯರ್ ಮಾಹಿತಿಯ ಆಧಾರದ ಮೇಲೆ ಭಯೋತ್ಪಾದನಾ ವಿರೋಧಿ ಕಾರ್ಯಚರಣೆಗಳನ್ನು ಪ್ರಾರಂಭಿಸಲಾಗಿದೆ ಎಂದು ಘೋಷಿಸಲಾಗಿದೆ. ದಕ್ಷಿಣ ರಷ್ಯಾದಲ್ಲಿರುವ ರೋಸ್ಟೊವ್ ಮತ್ತು ಲಿಪೆಟ್ಸ್ಕ್ ಕೂಡ ಭದ್ರತೆಯನ್ನು ಬಲಪಡಿಸಿದ್ದಾರೆ. ರೋಸ್ಟೊವ್‌ನಲ್ಲಿ, ಅಧಿಕಾರಿಗಳು ತಮ್ಮ ಮನೆಗಳನ್ನು ತೊರೆಯದಂತೆ ಎಲ್ಲಾ ನಿವಾಸಿಗಳಿಗೆ ಸೂಚಿಸಿದ್ದಾರೆ. 

    “ಮಾಸ್ಕೋದಲ್ಲಿ ಒಳಬರುವ ಮಾಹಿತಿಗೆ ಸಂಬಂಧಿಸಿದಂತೆ, ಭದ್ರತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಭಯೋತ್ಪಾದನಾ ವಿರೋಧಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ” ಎಂದು ಮಾಸ್ಕೋ ಮೇಯರ್ ಸೆರ್ಗೆಯ್ ಸೊಬಯಾನಿನ್ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.

    ರಷ್ಯಾದ ರಕ್ಷಣಾ ನಾಯಕತ್ವದ ಸಾಮರ್ಥ್ಯವನ್ನು ಬಹಿರಂಗವಾಗಿ ಪ್ರಶ್ನಿಸಿರುವ ಮತ್ತು ಟೀಕಿಸಿರುವ ಖಾಸಗಿ ಸೇನೆ ವ್ಯಾಗ್ನರ್ ನ ಮುಖ್ಯಸ್ಥ ಪ್ರಿಗೊಜಿನ್, ರಷ್ಯಾದ ರಕ್ಷಣಾ ಸಚಿವರ ಆದೇಶದ ಮೇರೆಗೆ ತಮ್ಮ ತಮ್ಮ ಸೈನಿಕರ ಬೆಂಗಾವಲು ವಾಹನದ ಮೇಲೆ ಯುದ್ಧ ವಿಮಾನಗಳಿಂದ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. ಜತೆಗೆ, ದೇಶದಲ್ಲಿ ಸೇನಾ ನಾಯಕತ್ವವನ್ನು ಪತನಗೊಳಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ. ತಮ್ಮ ಪಡೆಗಳು ಎಲ್ಲವನ್ನೂ ನಾಶಗೊಳಿಸಲಿವೆ ಎಂದು ಅವರು ಘೋಷಿಸಿದ್ದಾರೆ.

     ಇದರ ಬೆನ್ನಲ್ಲೇ, ರಷ್ಯಾದ ರಕ್ಷಣಾ ಸಚಿವಾಲಯವು ಪ್ರಿಗೋಜಿನ್ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ. ಸಶಸ್ತ್ರ ದಂಗೆಗಾಗಿ ಪ್ರಿಗೋಜಿನ್ 20 ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸುವ ಸಾಧ್ಯತೆ ಇದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ರಕ್ಷಣಾ ಸಚಿವಾಲಯವು ವ್ಯಾಗ್ನರ್ ಗುಂಪಿನ ಮುಖ್ಯಸ್ಥನ ಮೇಲೆ ಸಶಸ್ತ್ರ ದಂಗೆಯ ಆರೋಪ ಹೊರಿಸಿದೆ. ಇಷ್ಟೇ ಅಲ್ಲದೆ, ಪ್ರಿಗೋಜಿನ್ ಆದೇಶಗಳನ್ನು ಪಾಲಿಸದಂತೆ ವ್ಯಾಗ್ನರ್ ಗುಂಪಿನ ಪಡೆಗಳಿಗೆ ಮನವಿ ಮಾಡಿದೆ. 

    ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೂ ಈ ಕುರಿತು ಮಾಹಿತಿ ನೀಡಲಾಗಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಈ ಮಧ್ಯೆ, ರಷ್ಯಾದ ಸೇನಾ ಪ್ರಧಾನ ಕಚೇರಿಯ ಭದ್ರತೆಯನ್ನು ಹೆಚ್ಚಿಸಲಾಗಿದೆ. ಡಾನ್‌ನಲ್ಲಿರುವ ರಷ್ಯಾದ ಮಿಲಿಟರಿ ಪ್ರಧಾನ ಕಛೇರಿ ರೊಸ್ಟೊವ್‌ನ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪ್ರಧಾನ ಕಚೇರಿಯ ಸುತ್ತಲೂ ಶಸ್ತ್ರಸಜ್ಜಿತ ವಾಹನಗಳು ಮತ್ತು ಶಸ್ತ್ರಸಜ್ಜಿತ ಸೈನಿಕರನ್ನು ನಿಯೋಜಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap