ಕಠ್ಮಂಡು:
ಪ್ರಬಲ ಭೂಕಂಪಕ್ಕೆ ನೇಪಾಳ ರಾಷ್ಟ್ರ ನಲುಗಿ ಹೋಗಿದ್ದು, ಭೂಕಂಪದ ಪರಿಣಾಮ 128 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ, ನೂರಾರು ಮಂದಿ ಸಾವನ್ನಪ್ಪಿ, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಹಿಮಚ್ಛಾದಿತ ಪ್ರದೇಶವಾಗಿರುವ ನೇಪಾಳದ ಪಶ್ಚಿಮ ಗಡಿ ಭಾಗದಲ್ಲಿ ನೆಲಮಟ್ಟದಿಂದ ಭೂಮಿಯ ಒಳಗೆ ಸುಮಾರು 18 ಕಿ.ಮೀ. ದೂರದಲ್ಲಿ ಕಂಪನ ಕೇಂದ್ರ ಸ್ಥಾನವಿತ್ತು. ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆಯನ್ನು ಈ ಕಂಪನಗಳು ಹೊಂದಿದ್ದವು ಎಂದು ಅಮೆರಿಕದ ಜಿಯೋಲಜಿಕಲ್ ಸರ್ವೆ ಇಲಾಖೆ ತಿಳಿಸಿದೆ.
ಈ ನಡುವೆ ಕಂಪನದ ಕೇಂದ್ರ ಸ್ಥಾನದಿಂದ ಅಂದಾಜು 500 ಕಿ.ಮೀ. ದೂರವಿರುವ, ಭಾರತದ ರಾಜಧಾನಿ ದೆಹಲಿಯಲ್ಲೂ ಕಂಪನದ ಅನುಭವಗಳಾಗಿವೆ. ಆದರೆ, ಯಾವುದೇ ಕಟ್ಟಡ ಹಾನಿ ಅಥವಾ ಸಾವು ನೋವು ಸಂಭವಿಸಿಲ್ಲ. ದೆಹಲಿ – ರಾಷ್ಟ್ರ ರಾಜಧಾನಿ ಪ್ರಾಂತ್ಯ (ದೆಹಲಿ – ಎನ್ ಸಿಆರ್) ಹಾಗೂ ನೊಯ್ಡಾ ಮುಂತಾದ ಕಡೆಗಳಲ್ಲಿ ಕಂಪನದ ಅನುಭವ ಉಂಟಾಗಿದೆ ಎಂದು ತಿಳಿದುಬಂದಿದೆ.
ನೇಪಾಳದಲ್ಲಿ ಒಂದು ತಿಂಗಳ ಅವಧಿಯಲ್ಲಿ ಮೂರನೇ ಬಾರಿಗೆ ಪ್ರಬಲ ಭೂಕಂಪ ಸಂಭವಿಸಿದೆ. ದೆಹಲಿಯ ಪಕ್ಕದಲ್ಲಿರುವ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದ ಕೆಲವು ಭಾಗಗಳಲ್ಲಿಯೂ ಭೂಕಂಪನದ ಅನುಭವವಾಗಿದ್ದು, ಬಹುಮಹಡಿ ಕಟ್ಟಡಗಳಲ್ಲಿ ವಾಸಿಸುವ ಅನೇಕ ಜನರು ಹೊರಬಂದಿದ್ದಾರೆ.
ಉತ್ತರ ಪ್ರದೇಶದ ಲಕ್ನೋ, ಬಸ್ತಿ, ಬಾರಾಬಂಕಿ, ಫಿರೋಜಾಬಾದ್, ಅಮೇಥಿ, ಗೊಂಡಾ, ಪ್ರತಾಪಗಢ, ಭದೋಹಿ, ಬಹ್ರೈಚ್, ಗೋರಖ್‌ಪುರ ಮತ್ತು ಡಿಯೋರಿಯಾ ಜಿಲ್ಲೆಗಳಲ್ಲಿ ಭೂಕಂಪನದ ಅನುಭವವಾಗಿದೆ, ಜೊತೆಗೆ ಬಿಹಾರದ ಕತಿಹಾರ್, ಮೋತಿಹಾರಿ ಮತ್ತು ಪಾಟ್ನಾದಲ್ಲೂ ಭೂಮಿ ನಡುಗಿದ ಅನುಭವವಾಗಿದೆ.