ನವದೆಹಲಿ:
ಹೆದ್ದಾರಿ ಬಳಸುವ ಕಾರು ಮತ್ತಿತರ ವಾಹನಗಳ ಮುಂಭಾಗದ ವಿಂಡ್ಶೀಲ್ಡ್ ಮೇಲೆ ಫಾಸ್ಟ್ಯಾಗ್ ಅಳವಡಿಸುವುದು ಕಡ್ಡಾಯವಾಗಿದ್ದು, ಒಂದು ವೇಳೆ ನಿಯಮ ಪಾಲಿಸದಿದ್ದರೆ ಎರಡು ಪಟ್ಟು ಹೆಚ್ಚು ಟೋಲ್ ಶುಲ್ಕ ಪಾವತಿಸಬೇಕಾಗುತ್ತದೆ. ಅಲ್ಲದೆ, ಇಂತಹ ವಾಹನಗಳನ್ನು ಬ್ಲ್ಯಾಕ್ಲಿಸ್ಟ್ ಕೂಡ ಸೇರ್ಪಡೆಗೊಳಿಸುವ ಕಠಿಣ ನಿಯಮವನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ರೂಪಿಸಿದೆ.
ಈ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಿರುವ ಎನ್‌ಎಚ್‌ಐಎ, ಫಾಸ್ಟ್ಯಾಗ್ ಅಂಟಿಸದಿರುವುದರಿಂದ ಟೋಲ್ ಪ್ಲಾಜಾಗಳಲ್ಲಿ ಅನಗತ್ಯ ವಿಳಂಬವಾಗುತ್ತಿದೆ. ಇದು ಟೋಲ್ ಪ್ಲಾಜಾಗಳಲ್ಲಿ ಸಂಚಾರ ದಟ್ಟಣೆ ಉಂಟು ಮಾಡುವುದರಿಂದ ಇತರ ಜನರಿಗೆ ಅನಾನುಕೂಲತೆ ಉಂಟಾಗುತ್ತದೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಫಾಸ್ಟ್ಯಾಗ್ ಅಳವಡಿಸದಿದ್ದಲ್ಲಿ ಡಬಲ್ ಟೋಲ್ ತೆರಿಗೆಯನ್ನು ಸಂಗ್ರಹಿಸಲು ಎಲ್ಲಾ ಏಜೆನ್ಸಿಗಳಿಗೆ ವಿವರವಾದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಅನ್ನು ನೀಡಲಾಗಿದೆ.
ಅಷ್ಟೇ ಅಲ್ಲದೆ, ವಾಹನದ ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಸ್ಥಿರವಾದ ಫಾಸ್ಟ್‌ಟ್ಯಾಗ್ ಇಲ್ಲದೆ ಟೋಲ್ ಲೇನ್‌ಗೆ ಪ್ರವೇಶಿಸಿದರೆ ದಂಡ ವಿಧಿಸುವ ಬಗ್ಗೆ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ಈ ಮಾಹಿತಿಯನ್ನು ಪ್ರಮುಖವಾಗಿ ಪ್ರದರ್ಶಿಸಲಾಗುತ್ತದೆ. ಹೆಚ್ಚುವರಿಯಾಗಿ, ಫಾಸ್ಟ್‌ಟ್ಯಾಗ್‌ಗಳನ್ನು ಅಳವಡಿಸದ ವಾಹನಗಳಿಗೆ ವಾಹನ ನೋಂದಣಿ ಸಂಖ್ಯೆ ಅನ್ನು ಸೆರೆಹಿಡಿಯುವ CCTV ಫೂಟೇಜ್ ಅನ್ನು ದಾಖಲಿಸಲಾಗುತ್ತದೆ. ಈ ಕ್ರಮವು ವಿಧಿಸಲಾದ ಶುಲ್ಕಗಳ ಸರಿಯಾದ ದಾಖಲೆಗಳನ್ನು ಮತ್ತು ಟೋಲ್ ಲೇನ್‌ಗಳಲ್ಲಿ ಅಂತಹ ವಾಹನಗಳ ಉಪಸ್ಥಿತಿಯನ್ನು ನಿರ್ವಹಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನು ತಡೆಯಲು ದುಪ್ಪಟ್ಟು ಶುಲ್ಕ ವಿಧಿಸಬೇಕು. ಫಾಸ್ಟಾಗ್ ನಿಯಮಗಳನ್ನು ಪಾಲಿಸದಿದ್ದರೆ ವಿಧಿಸಲಾಗುವ ದಂಡಗಳ ಕುರಿತು ಟೋಲ್ ಪ್ಲಾಜಾಗಳಲ್ಲಿ ಎಲ್ಲರಿಗೂ ಕಾಣಿಸುವಂತೆ ಮಾಹಿತಿ ಪ್ರದರ್ಶಿಸಬೇಕು. ಫಾಸ್ಟಾಗ್ ಇಲ್ಲದ ವಾಹನಗಳ ನೋಂದಣಿ ನಂಬರ್(ವಿಆರ್‌ಎನ್) ಸಿಸಿಟಿವಿಯಲ್ಲಿ ದಾಖಲಾಗಿರಬೇಕು. ಇದರಿಂದ ಶುಲ್ಕಕ್ಕೆ ಸಂಬಂಧಿಸಿದ ಸೂಕ್ತ ದಾಖಲೆ ನಿರ್ವಹಣೆ ಮತ್ತು ವಾಹನವು ಟೋಲ್ ಲೇನ್‌ನಲ್ಲಿತ್ತು ಎಂಬುದನ್ನು ತಿಳಿಯಬಹುದು.
ಫಾಸ್ಟಾಗ್ ಅಂಟಿಸದ ವಾಹನಗಳು ಉಚಿತ ಪ್ಲಾಜಾದಲ್ಲಿ ಹಾದು ಹೋಗಬೇಕಾಗುತ್ತದೆ ಮತ್ತು ದುಪ್ಪಟ್ಟು ಶುಲ್ಕ ಭರಿಸುವುದು ಮಾತ್ರವಲ್ಲದೇ, ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ.ಬ್ಯಾಂಕುಗಳು ಅಥವಾ ಏಜೆನ್ಸಿಗಳು ಫಾಸ್ಟ್ಯಾಗ್ ವಿತರಿಸುವ ಸಂದರ್ಭದಲ್ಲೇ ಅದನ್ನು ನಿಗದಿತ ವಾಹನದ ಮುಂಭಾಗದ ವಿಂಡ್ಶೀಲ್ಡ್ ಮೇಲೆ ಅಂಟಿಸಲಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದೆ.
ದೇಶಾದ್ಯಂತ ಎಂಟು ಕೋಟಿಗೂ ಹೆಚ್ಚು ಜನರು ಫಾಸ್ಟ್ಯಾಗ್ ಹೊಂದಿದ್ದಾರೆ. ಹೆದ್ದಾರಿಯಲ್ಲಿ ಪ್ರಯಾಣಿಸುವ ಶೇ. 98ರಷ್ಟು ವಾಹನಗಳು ಫಾಸ್ಟ್ಯಾಗ್ ಹೊಂದಿವೆ. ದೇಶಾದ್ಯಂತ 45,000 ಕಿಮೀಯಷ್ಟು ರಸ್ತೆಗಳಲ್ಲಿ 1,000 ಟೋಲ್ ಪ್ಲಾಜಾಗಳಿವೆ. ಈ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ಸಿಸ್ಟಂ ಬಂದ ಬಳಿಕ ಟೋಲ್ ಪ್ಲಾಜಾದಲ್ಲಿ ಗಂಟೆಗಟ್ಟಲೆ ನಿಲ್ಲುವ ಪ್ರಮೇಯ ತಪ್ಪಿದೆ. ಮ್ಯೂನುಯಲ್ ಆಗಿ ಸುಂಕ ಪಡೆಯುವುದರಿಂದ ಆಗುತ್ತಿದ್ದ ವಿಳಂಬ ತಪ್ಪಿದೆ. ಹೆದ್ದಾರಿ ಪ್ರಯಾಣ ತುಸು ಆರಾಮಗೊಂಡಿದೆ.
ಡಬಲ್ ಶುಲ್ಕದ ಈ ಉಪಕ್ರಮವು ಟೋಲ್ ಕಾರ್ಯಾಚರಣೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಮತ್ತು ರಾಷ್ಟ್ರೀಯ ಹೆದ್ದಾರಿ ಬಳಕೆದಾರರಿಗೆ ತಡೆರಹಿತ ಮತ್ತು ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸಲು ಸಹಾಯ ಮಾಡುತ್ತದೆಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.