ಬುಡಾಪೆಸ್ಟ್:
ಭಾರತದ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಅವರು ಭಾನುವಾರ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಐತಿಹಾಸಿಕ ಚೊಚ್ಚಲ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ. ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಗಾಯದಿಂದ ಬಳಲುತ್ತಿದ್ದ ಚೋಪ್ರಾ, ಹಂಗೇರಿಯ ರಾಜಧಾನಿಯಲ್ಲಿ ನಡೆದ ಸ್ಪರ್ಧೆಯಲ್ಲಿ ತನ್ನ ಎರಡನೇ ಸರದಿಯಲ್ಲಿ 88.17 ರ ಬೃಹತ್ ಎಸೆತದೊಂದಿಗೆ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಪಾಕಿಸ್ತಾನದ ಅರ್ಷದ್ ನದೀಮ್ 87.82 ಅಂತರ ಎಸೆದು, ತಮ್ಮ ದೇಶಕ್ಕೆ ಮೊದಲ ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕವನ್ನು ಪಡೆದರು. ಜೆಕ್ ಗಣರಾಜ್ಯದ ಯಾಕೂಬ್ ವಡ್ಲೆಜ್ 86.67 ಜಾವೆಲಿನ್ ಎಸೆದು ಕಂಚಿನ ಪದಕಕ್ಕೆ ತೃಪ್ಪಿಪಟ್ಟುಕೊಂಡರು. ಕಣದಲ್ಲಿದ್ದ ಇತರ ಇಬ್ಬರು ಭಾರತೀಯರು ಕೂಡ ಅತ್ಯುತ್ತಮ ಪ್ರದರ್ಶನ ತೋರಿದರಾದರೂ ಪದಕ ಪಡೆಯುವಲ್ಲಿ ವಿಫಲರಾದರು.
ಕಿಶೋರ್ ಕುಮಾರ್ ಜೆನಾ ಅವರು 84.77ರ ವೈಯಕ್ತಿಕ ಅತ್ಯುತ್ತಮ ಎಸೆತದೊಂದಿಗೆ ಐದನೇ ಸ್ಥಾನ ಪಡೆದರು. ಮನು 84.14 ಅಂಕಗಳೊಂದಿಗೆ ಆರನೇ ಸ್ಥಾನ ಪಡೆದರು. ಆದರೆ, ಭಾರತವು ನೀರಜ್ ಚೋಪ್ರಾರಿಂದ ಹೆಚ್ಚಿನ ಭರವಸೆ ಹೊಂದಿತ್ತು. ಚೋಪ್ರಾ ತಮ್ಮ ಎರಡನೇ ರೌಂಡ್ನಲ್ಲಿ ಅದ್ಭುತವಾದ ಎಸೆತದೊಂದಿಗೆ ತಮ್ಮ ಮೊದಲ ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಿನ್ನವನ್ನು ತಮ್ಮದಾಗಿಸಿಕೊಂಡರು.
ಇದಕ್ಕೂ ಮುನ್ನ, 2003 ರಲ್ಲಿ ಪ್ಯಾರಿಸ್ನಲ್ಲಿ ನಡೆದ ವಿಶ್ವ ಚಾಂಪಿಯನ್ಶಿಪ್ನ ಮಹಿಳಾ ಲಾಂಗ್ ಜಂಪ್ನಲ್ಲಿ ಅಂಜು ಬಾಬಿ ಜಾರ್ಜ್ ಕಂಚಿನ ಪದಕ ಪಡೆದಿದ್ದರು. ಆದರೆ, ಯಾವುದೇ ಭಾರತೀಯ ಪುರುಷ ಅಥವಾ ಮಹಿಳೆ ಚಿನ್ನದ ಪದಕವನ್ನು ಗೆದ್ದಿರಲಿಲ್ಲ. ನೀರಜ್ ಚೋಪ್ರಾ ಕಳೆದ ವರ್ಷ (2022) ಯುಎಸ್ನ ಒರೆಗಾನ್ನಲ್ಲಿ ಬೆಳ್ಳಿ ಗೆದ್ದಿದ್ದರು.