ಬೆಂಗಳೂರು:
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಕಳೆದ ಫೆಬ್ರವರಿಯಿಂದ ವೇತನ ಸ್ಥಗಿತಗೊಂಡಿದ್ದು, ಶಿಕ್ಷಕರ ಕುಟುಂಬ ಇದೀಗ ಬೀದಿಗೆ ಬೀಳುವ ಸ್ಥಿತಿಗೆ ತಲುಪಿದೆ.
ಹಿಂದಿನ ಸರ್ಕಾರದ ಅವಧಿಯಲ್ಲಿ ಸ್ಥಗಿತಗೊಂಡ ವೇತನ ಈವರೆಗೆ ಬಿಡುಗಡೆಯಾಗಿಲ್ಲ. ಇದರಿಂದ ಶಿಕ್ಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸ, ಬಾಡಿಗೆ, ದಿನನಿತ್ಯದ ಬದುಕು ಸಾಗಿಸಲು ಪ್ರಯಾಸಪಡುವಂತಾಗಿದೆ. ಈ ಶಿಕ್ಷಕರ ಕುಟುಂಬ ಎಂಟು ತಿಂಗಳಿಂದ ವೇತನ ಸಿಗದೇ ಹಬ್ಬ ಹರಿದಿನಗಳನ್ನು ಆಚರಿಸುತ್ತಿಲ್ಲ. ಸಂತಸ ಎನ್ನುವುದು ಇವರಲ್ಲಿ ಮಾಯವಾಗಿದೆ. ಮುಂದೇನು ಎಂದು ತೋಚದ ಸ್ಥಿತಿಗೆ ತಲುಪಿದ್ದಾರೆ.
ಶಿಕ್ಷಣ ಸಚಿವರಿಗೆ ಈ ಸಮಸ್ಯೆಯ ಗಂಭೀರತೆಯೇ ಅರ್ಥವಾಗುತ್ತಿಲ್ಲ. ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಇದು ಸಮಸ್ಯೆಯೇ ಅಲ್ಲ ಎನಂತಾಗಿದೆ. ಹಣಕಾಸು ಇಲಾಖೆ ಹಣ ಬಿಡುಗಡೆಗೆ ಹತ್ತಾರು ತಕರಾರುಗಳನ್ನು ತೆಗೆಯುತ್ತಿದೆ.
ಕಳೆದ 2009ರಲ್ಲಿ ಕೇಂದ್ರ ಸರ್ಕಾರ ಮಾಧ್ಯಮಿಕ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು “ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷ ಅಭಿಯಾನ “ ಜಾರಿಗೆ ತಂದಿತ್ತು. ಮಾಧ್ಯಮಿಕ ಶಿಕ್ಷಣ ಪ್ರಮಾಣವನ್ನು ಶೇ 52 ರಿಂದ ಶೇ 75ಕ್ಕೆ ಹೆಚ್ಚಿಸುವ ಗುರಿಯೊಂದಿಗೆ ಈ ಅಭಿಯಾನ ಆರಂಭಿಸಲಾಗಿತ್ತು.
ಮಾಧ್ಯಮಿಕ ಶಿಕ್ಷಣ ಸಮೀಪದ ಶಾಲೆಗಳಲ್ಲೇ ದೊರಕಿಸಿಕೊಡುವ ಗುರಿಯೊಂದಿಗೆ 2020ರ ವೇಳೆಗೆ ಎಲ್ಲರಿಗೂ ಮಾಧ್ಯಮಿಕ ಶಿಕ್ಷಣ ಎನ್ನುವ ಘೋಷ ವಾಕ್ಯದಡಿ ಈ ಯೋಜನೆ ರೂಪಿಸಲಾಗಿತ್ತು. ಈ ಅಭಿಯಾನದಡಿ ಪ್ರತಿ 30 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರನ್ನು ನೇಮಿಸಿಕೊಂಡು, ವಿಜ್ಞಾನ, ಗಣಿತ ಮತ್ತು ಇಂಗ್ಲೀಷ್ ಬೋಧನೆಯ ಗುಣಮಟ್ಟ ಹೆಚ್ಚಿಸುವ ಉದ್ದೇಶ ಹೊಂದಲಾಗಿತ್ತು.
ಇಂತಹ ಘನ ಉದ್ದೇಶದಿಂದ ನಡೆಯುತ್ತಿರುವ ಅಭಿಯಾನದಡಿ ನೇಮಕಗೊಂಡು ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಸರ್ಕಾರದ ಸ್ವಯಂಕೃತ ತಪ್ಪುಗಳಿಂದ ತೊಂದರೆ ಸಿಲುಕಿದ್ದಾರೆ.
ಶಿಕ್ಷಕರಿಗೆ ಸುಮಾರು 100 ಕೋಟಿ ರೂಪಾಯಿಗೂ ಹೆಚ್ಚು ಬಾಕಿ ವೇತನ ಬಿಡುಗಡೆ ಮಾಡಮಾಡಬೇಕಾಗಿದೆ. ಸಮಸ್ಯೆ ಇಷ್ಟೊಂದು ಗಂಭೀರವಾಗಿದ್ದರೂ ಸಹ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಇತ್ತ ಲಕ್ಷ್ಯ ವಹಿಸಿಲ್ಲ.
ಬಾಕಿ ವೇತನ ಬಿಡುಗಡೆ ಕುರಿತು ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿಲ್ಲ. ಇದರಿಂದ ಶಿಕ್ಷಕರ ಆತ್ಮಸ್ಥೈರ್ಯ ಕುಗ್ಗಿ ಹೋಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಬೋಧನೆಯಲ್ಲಿ ಆಸಕ್ತಿ ಕಳೆದುಕೊಂಡರೆ ಎನ್ನುವ ಭೀತಿ ಸಹ ಆವರಿಸಿದೆ.
ಈ ಅಭಿಯಾನದಡಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಶಿಕ್ಷಣ ಕ್ಷೇತ್ರವನ್ನು ಪ್ರತಿನಿಧಿಸುವ ಜನ ಪ್ರತಿನಿಧಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಕೊಟ್ಟು ಪರಿಹಾರ ಸಿಗದೇ ರೋಸಿ ಹೋಗಿದ್ದಾರೆ. ಆದರೆ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಣ ಸಚಿವರು ಇತ್ತ ಇನ್ನೂ ಗಮನಹರಿಸಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








