ವಿಐಪಿಗಳ ಸಂಚಾರದ ವೇಳೆ ಇನ್ನು ಸೈರನ್ ಕೂಗಲ್ಲ!

ಬೆಂಗಳೂರು:

   ಗಣ್ಯರು, ವಿಐಪಿಗಳು ಸಂಚಾರ ನಡೆಸುವಾಗ ಸೈರನ್ ಹಾಕಿಕೊಂಡು ಸಾಲು ಸಾಲು ವಾಹನ ಹೋಗುತ್ತದೆ. ಕೆಲ ವಿಐಪಿಗಳ ಸಂಚಾರದ ವೇಳೆ ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗುತ್ತದೆ. ಆದ್ದರಿಂದ ರಸ್ತೆಗಳಲ್ಲಿನ ಸಾಮಾನ್ಯ ಜನರು ಕಾದು ನಿಲ್ಲುವುದು ಅನಿವಾರ್ಯವಾಗಿದೆ. ಆದರೆ ಕರ್ನಾಟಕದಲ್ಲಿ ಈ ವ್ಯವಸ್ಥೆ ಬದಲಾಗಲಿದೆ.

   ಈ ಕುರಿತು ಡಾ.ಎಂ.ಎ.ಸಲೀಂ ಮಹಾ ನಿರ್ದೇಶಕರು ಮತ್ತು ಪೊಲೀಸ್ ಮಹಾ ನಿರೀಕ್ಷಕರು ಜ್ಞಾಪನಾ ಪತ್ರವನ್ನು ಹೊರಡಿಸಿದ್ದಾರೆ. ಈ ಪತ್ರ ವಿಐಪಿ ಸಂಚಾರದ ವೇಳೆ ಸೈರನ್ ಬಳಕೆಗೆ ಕಡಿವಾಣ ಹಾಕುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.ಸಾರ್ವಜನಿಕರ ಸುರಕ್ಷತೆ ಹಾಗೂ ಶಬ್ದ ಮಾಲಿನ್ಯ ನಿಯಂತ್ರಣ ದೃಷ್ಟಿಯಿಂದ, ವಿಐಪಿ ಸಂಚಾರದ ಸಂದರ್ಭದಲ್ಲಿ ವಾಹನಗಳ ಸೈರನ್ ಬಳಕೆಗೆ ಕಡಿವಾಣ ಹಾಕುವಂತೆ ಎಲ್ಲಾ ಘಟಕಾಧಿಕಾರಿಗಳಿಗೆ ಸೂಚಿಸಲಾಗಿದೆ.

   ಗಣ್ಯ ವ್ಯಕ್ತಿಗಳ ಸಂಚರಣೆ ಸಮಯದಲ್ಲಿ ಅನವಶ್ಯಕವಾಗಿ ಸೈರನ್ ಬಳಕೆ ಮಾಡುವುದರಿಂದ ಗಣ್ಯ ವ್ಯಕ್ತಿಗಳು ಯಾವ ರಸ್ತೆಯಲ್ಲಿ ಚಲಿಸುತ್ತಿದ್ದಾರೆ ಎಂಬ ಬಗ್ಗೆ ಅನಧಿಕೃತ ವ್ಯಕ್ತಿಗಳಿಗೆ ಮಾಹಿತಿ ರವಾನೆಯಾಗುವುದಲ್ಲದೆ, ಗಣ್ಯ ವ್ಯಕ್ತಿಗಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ.

   ಇದಲ್ಲದೆ, ಅನಗತ್ಯ ಸೈರನ್ ಬಳಕೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುವುದಲ್ಲದೇ ಶಬ್ದ ಮಾಲಿನ್ಯವೂ ಉಂಟಾಗುತ್ತದೆ. ಸಾರ್ವಜನಿಕ ರಸ್ತೆಗಳ ಮೇಲೆ ಹಠಾತ್ತಾಗಿ ಸೈರನ್ ಬಳಸುವುದರಿಂದ ಇತರ ವಾಹನ ಚಾಲಕರಿಗೆ ದ್ವಂದ್ವ ಉಂಟಾಗಿ ಯಾವ ಕಡೆಗೆ ಚಲಿಸಬೇಕೆಂಬುದು ತಿಳಿಯದೆ ವಾಹನವನ್ನು ಅಡ್ಡಾದಿಡ್ಡಿಯಾಗಿ ಚಲಿಸಿ ಬೆಂಗಾವಲು ಮತ್ತು ಇತರ ವಾಹನಗಳಿಗೆ ಗೊಂದಲ ಉಂಟುಮಾಡುವ ಸಾಧ್ಯತೆಯೂ ಇರುತ್ತದೆ ಎಂದು ಪತ್ರದಲ್ಲಿ ಹೇಳಿದ್ದಾರೆ.

   ವಿಐಪಿ ಸಂಚಾರದ ವೇಳೆ, ವಾಹನಗಳ ತುರ್ತು ಚಲನವಲನದ ಅವಶ್ಯಕತೆಗಳಿಗೆ ಅನುಗುಣವಾಗಿ ದೂರಸಂಪರ್ಕ ಸಾಧನಗಳಾದ ವೈರ್‌ಲೆಸ್ ಕಮ್ಯುನಿಕೇಶನ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಉಪಯೋಗಿಸುವುದು ಹೆಚ್ಚು ಶಿಸ್ತಿನ ಹಾಗೂ ಸುರಕ್ಷಿತ ಮಾರ್ಗವಾಗಿದೆ ಎಂದು ತಿಳಿಸಿದ್ದಾರೆ.ಸೈರನ್‌ಗಳನ್ನು ಕೇವಲ ತುರ್ತು ಸೇವಾ ವಾಹನಗಳಾದ ಅಂಬ್ಯುಲೆನ್ಸ್, ಪೊಲೀಸ್ ವಾಹನಗಳು ಮತ್ತು ಅಗ್ನಿಶಾಮಕ ವಾಹನಗಳು ಅನಿವಾರ್ಯ ಪರಿಸ್ಥಿತಿಗಳಲ್ಲಿ ಮಾತ್ರ ಬಳಸಬೇಕು.

   ಈ ಅದೇಶವನ್ನು ಘಟಕಾಧಿಕಾರಿಗಳು ಸಂಪೂರ್ಣವಾಗಿ ಪಾಲಿಸುವಂತೆ/ ತಮ್ಮ ಅಧೀನದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೂಚಿಸುವುದು ಎಂದು ಪತ್ರದಲ್ಲಿ ಸೂಚನೆ ನೀಡಿದ್ದಾರೆ.ಕರ್ನಾಟಕದಲ್ಲಿ ಮುಖ್ಯಮಂತ್ರಿಗಳು, ರಾಜ್ಯಪಾಲರ ಸಂಚಾರದ ವೇಳೆ ಝಿರೋ ಟ್ರಾಫಿಕ್ ವ್ಯವಸ್ಥೆ ಇದೆ. ಕಾರು ರಸ್ತೆಯಲ್ಲಿ ಬರುವ 10-15 ನಿಮಿಷ ಮೊದಲೇ ಉಳಿದ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಿ ಸೈರನ್ ಹಾಕಿಕೊಂಡು ಪೊಲೀಸರು ಸಾಗುತ್ತಾರೆ.

   ಆದರೆ ಈ ಝಿರೋ ಟ್ರಾಫಿಕ್, ಸೈರನ್ ಕಾರಣದಿಂದ ಜನರು ಕಿರಿಕಿರಿ ಅನುಭವಿಸುತ್ತಾರೆ. ಸಚಿವರು, ಶಾಸಕರು ಸಂಚಾರ ನಡೆಸುವ ಸಂದರ್ಭದಲ್ಲಿ ಸಿಗ್ನಲ್ ಬಳಿ ವಾಹನ ಬಂದಾದ ಅದನ್ನು ತೆರೆಯಲಾಗುತ್ತದೆ. ಝಿರೋ ಟ್ರಾಫಿಕ್ ವ್ಯವಸ್ಥೆ ಇಲ್ಲ.ಬೆಂಗಳೂರಿನಂತಹ ನಗರದಲ್ಲಿ ಪ್ರತಿನಿತ್ಯ ವಿಐಪಿಗಳ ಸಂಚಾರ ಇರುತ್ತದೆ. ಆಗ ಸೈರನ್, ಉಳಿದ ವಾಹನಗಳನ್ನು ನಿಲ್ಲಿಸುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತದೆ. ಆದ್ದರಿಂದ ಪೊಲೀಸರು ವಿಐಪಿ ವಾಹನ ಸಾಗುವಾಗ ಸೈರನ್ ಹಾಕುವಂತಿಲ್ಲ ಎಂದು ಸೂಚನೆ ಕೊಟ್ಟಿದ್ದಾರೆ.

Recent Articles

spot_img

Related Stories

Share via
Copy link