ನವದೆಹಲಿ:
ಪ್ರಶ್ನೆ ಪತ್ರಿಕೆ ಸೋರಿಕೆಯ ಕಾರಣದಿಂದಾಗಿ ಎನ್ಇಇಟಿ-ಯುಜಿ ಪರೀಕ್ಷೆ ವಿವಾದಕ್ಕೆ ಒಳಗಾಗಿತ್ತು. ಈ ಬಗ್ಗೆ ಸಿಬಿಐ ತನಿಖೆ ನಡೆಯುತ್ತಿದ್ದು, ಶನಿವಾರ ಮಧ್ಯಾಹ್ನ ಕೇಂದ್ರವಾರು ಫಲಿತಾಂಶ ಪ್ರಕಟಿಸುವಂತೆ ಸುಪ್ರೀಂ ಕೋರ್ಟ್ NTA ಗೆ ಸೂಚನೆ ನೀಡಿತ್ತು. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಈಗ ಫಲಿತಾಂಶ ಪ್ರಕಟಗೊಂಡಿದೆ. ಮೇ.05 ರಂದು 14 ವಿದೇಶದಲ್ಲಿರುವ ನಗರಗಳು ಸೇರಿ ಒಟ್ಟು 571 ನಗರಳ 4,750 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಇದರಲ್ಲಿ 24 ಲಕ್ಷ ಅಭ್ಯರ್ಥಿಗಳು ಭಾಗಿಯಾಗಿದ್ದರು.
ಆಕಾಂಕ್ಷಿಗಳ ಗುರುತನ್ನು ಮರೆಮಾಚುವ ಮೂಲಕ ಫಲಿತಾಂಶಗಳನ್ನು ಪ್ರಕಟಿಸಲು ನ್ಯಾಯಾಲಯವು ಆದೇಶ ನೀಡಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಕೇಂದ್ರಗಳಲ್ಲಿ ಹಾಜರಾಗುವ ಅಭ್ಯರ್ಥಿಗಳು ಬೇರೆಡೆ ಪರೀಕ್ಷೆ ಬರೆಯುವವರಿಗಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಬಯಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಪ್ರತಿಷ್ಠಿತ ಪರೀಕ್ಷೆಯಲ್ಲಿನ ಅವ್ಯವಹಾರದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದತಿ, ಮರು ಪರೀಕ್ಷೆ ಮತ್ತು ನ್ಯಾಯಾಲಯದ ಮೇಲ್ವಿಚಾರಣೆಯ ತನಿಖೆಗೆ ಕೋರಿ ಸಲ್ಲಿಸಲಾದ ಅರ್ಜಿಗಳ ವಾದವನ್ನು ಸುಪ್ರೀಂ ಕೋರ್ಟ್ ಜುಲೈ 22 ರಂದು ಪುನರಾರಂಭಿಸಲಿದೆ.