ಛತ್ತೀಸ್‌ಗಢ:
ಇಬ್ಬರು ಮಹಿಳಾ ಮಾವೋವಾದಿಗಳು ಸೇರಿ ಮೂವರನ್ನು ಛತ್ತೀಸ್‌ಗಢದ ಸುಕ್ಮಾದ ತುಮಲ್‌ಪಾಡ್ ಗ್ರಾಮದ ಬಳಿ ಭದ್ರತಾ ಪಡೆಗಳು ಹೊಡೆದು ಉರುಳಿಸಿವೆ. ಈ ಮೂವರಿಗೆ ತಲಾ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು ಎಂದು ಭಾನುವಾರ ಐಜಿ ಬಸ್ತಾರ್ ಪಿ. ಸುಂದರರಾಜ್ ತಿಳಿಸಿದ್ದಾರೆ. ಸುಕ್ಮಾ ಪೊಲೀಸರು ಕೂಡ ಈ ಮಾಹಿತಿಯನ್ನು ದೃಢಪಡಿಸಿದ್ದಾರೆ.ಮೃತರಲ್ಲಿ ಮಿಲಿಟಿಯಾ ಕಮಾಂಡರ್ ಮತ್ತು ಸ್ನೈಪರ್ ತಜ್ಞ ಮದ್ವಿ ದೇವಾ ಸೇರಿದ್ದಾರೆ ಎಂದು ಅವರು ತಿಳಿಸಿದ್ದಾರೆ. ತುಮಲ್‌ಪಾಡ್ ಗ್ರಾಮದ ಬಳಿ ಭದ್ರತಾ ಪಡೆಗಳು ನಡೆಸಿದ ಎನ್ ಕೌಂಟರ್ ನಲ್ಲಿ ಇಬ್ಬರು ಮಹಿಳಾ ಮಾವೋವಾದಿಗಳಾದ ಪೊಡ್ಯಂ ಗಂಗಿ ಮತ್ತು ಸೋಡಿ ಗಂಗಿ ಕೂಡ ಸೇರಿದ್ದಾರೆ.
ಮಾವೋವಾದಿಗಳ ಎನ್ ಕೌಂಟರ್ ಬಳಿಕ ಜಿಲ್ಲಾ ಮೀಸಲು ಗಾರ್ಡ್‌ನ ತಂಡಗಳು 303 ರೈಫಲ್, ಬಿಜಿಎಲ್ ಲಾಂಚರ್ ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆದಿವೆ. ಘಟನೆ ಬಳಿಕ ಈ ಭಾಗದಲ್ಲಿ ತೀವ್ರ ಶೋಧ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ನವೆಂಬರ್ 11ರಂದು ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಆರು ನಕ್ಸಲರು ಸಾವನ್ನಪ್ಪಿದ್ದರು. ಇವರಲ್ಲಿ ಮಾವೋವಾದಿ ನಾಯಕಿ ಉರ್ಮಿಳಾ, ಹಿರಿಯ ಕಾರ್ಯಕರ್ತ ಪಾಪಾ ರಾವ್ ಅವರ ಪತ್ನಿ ಬುಚಣ್ಣ ಕುಡಿಯಮ್ ಸೇರಿದ್ದರು ಈ ಆರು ಮಂದಿಯನ್ನು ಇಂದ್ರಾವತಿ ರಾಷ್ಟ್ರೀಯ ಉದ್ಯಾನವನ ಪ್ರದೇಶದ ದೂರದ ಪ್ರದೇಶಗಳಲ್ಲಿರುವ ಕಂದುಲ್ನಾರ್ ಮತ್ತು ಕಚ್ಲಾರಾಮ್ ಗ್ರಾಮಗಳ ಕಾಡುಗಳಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಇವರಿಗೆ ಒಟ್ಟು 27 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು ಎಂದು ಬಿಜಾಪುರ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಯಾದವ್ ತಿಳಿಸಿದ್ದಾರೆ.








