ತುರುವೇಕೆರೆ:
ಪಟ್ಟಣದ ತಾಲ್ಲೂಕು ಕಚೇರಿಯ ಅವ್ಯವಸ್ಥೆಗಳ ಬಗ್ಗೆ ತಾಲ್ಲೂಕು ಕಚೇರಿಗೆ ಬೇಕಿದೆ ಕಾಯಕಲ್ಪ ಎಂಬ ಶೀರ್ಷಿಕೆಯಡಿ ವಾರದ ಹಿಂದೆ ಪ್ರಕಟವಾಗಿದ್ದ ಪ್ರಜಾಪ್ರಗತಿ ವರದಿಗೆ ತಾಲ್ಲೂಕು ಆಡಳಿತ ಎಚ್ಚೆತ್ತುಕೊಂಡಿದೆ.
ಹಲವಾರು ತಿಂಗಳುಗಳಿಂದ ತಾಲ್ಲೂಕು ಕಚೇರಿ ಆವರಣದೊಳಗಿದ್ದ ಮರಗಳ ಕೊಂಬೆ-ರೆಂಬೆಗಳನ್ನು ಕಡಿದ ಪರಿಣಾಮ ಅವುಗಳನ್ನು ತಕ್ಷಣ ತೆರವುಗೊಳಿಸದೆ ಹಾಗೆಯೆ ಸ್ಥಳದಲ್ಲಿ ಬಿಟ್ಟಿದ್ದರಿಂದ ಕಡಿದ ಮರದ ತ್ಯಾಜ್ಯಗಳು ಒಣಗಿ ಬೆಂಡಾಗಿದ್ದವು.
ಯಾರಾದರೂ ಬೀಡಿ-ಸಿಗರೇಟು ಸೇದುವವರು ಅರಿವಿಲ್ಲದೆ ಇತ್ತ ಬೆಂಕಿಕಡ್ಡಿ ಎಸೆದಿದ್ದರೆ ತಾಲ್ಲೂಕು ಕಚೇರಿಗೆ ಭಾರಿ ಅನಾಹುತವಾಗುವ ಸಾಧ್ಯತೆ ಇತ್ತು. ತಾಲ್ಲೂಕು ಕಚೇರಿಯ ಸಮಸ್ಯೆಗಳನ್ನು ಮನಗಂಡ ಪ್ರಜಾ ಪ್ರಗತಿಯು ಈ ಕುರಿತು ಪತ್ರಿಕೆಯಲ್ಲಿ ಸವಿಸ್ತಾರವಾಗಿ ವರದಿ ಮಾಡುವ ಮೂಲಕ ಸಂಬಂಧಿಸಿದವರನ್ನು ಎಚ್ಚರಿಸಿತ್ತು.
ಈ ನಿಟ್ಟಿನಲ್ಲಿ ಮಂಗಳವಾರ ತಾಲ್ಲೂಕು ಕಚೇರಿ ಆವರಣದೊಳಕ್ಕೆ ಆಗಮಿಸಿದ ಪೌರ ಕಾರ್ಮಿಕರು ಎರಡು ಟ್ರ್ಯಾಕ್ಟರ್ ಲೋಡ್ ಕೊಂಬೆಗಳನ್ನು ತೆರವು ಮಾಡಲು ಮುಂದಾದರು. ಈ ಸಂದರ್ಭದಲ್ಲಿ ಮರದ ಕೊಂಬೆಗಳ ಅಡಿಯಲ್ಲಿ ಹಾವೊಂದು ಕಾಣಿಸಿಕೊಂಡಿದ್ದರಿಂದ ಕಾರ್ಮಿಕರು ಹೆದರಿ ಕೆಲಸ ಮಾಡಲು ಹಿಂಜರಿಯುವಂತಾಯಿತು.
ಇದನ್ನು ಗಮನಿಸಿದ ನಾಗರಿಕರೊಬ್ಬರು ಹಾವು ಹಿಡಿಯುವವರನ್ನು ಕರೆಸಿ ಹಾವು ಹಿಡಿಸಿದರಾದರೂ ಪೌರ ಕಾರ್ಮಿಕರು ಭಯದಿಂದಲೆ ಅಷ್ಟೊ ಇಷ್ಟೊ ಮರದ ರೆಂಬೆ-ಕೊಂಬೆಗಳನ್ನು ಟ್ಯ್ರಾಕ್ಟರ್ನಲ್ಲಿ ತುಂಬಿಕೊಂಡು ಒಣಗಿದ ತರಗೆಲೆಗಳನ್ನು ಹಾಗೆಯೆ ಬಿಟ್ಟು ಕಾಲ್ಕಿತ್ತರು.
ಒಟ್ಟಿನಲ್ಲಿ ತಾಲ್ಲೂಕು ಕಚೇರಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಹೆಚ್ಚಿದ್ದು, ಇದೀಗ ಅವುಗಳಿಗೆ ಮುಕ್ತಿ ಎಂಬಂತೆ ಕಸ ತೆರವು ಗೊಳಿಸುವ ಮೂಲಕ ಚಾಲನೆ ನೀಡಲಾಗಿದೆ ಎಂಬುದು ಸಾರ್ವಜನಿಕರ ಆಶಯವಾಗಿದೆ.
ಮರ ಕಡಿದ ರೆಂಬೆ-ಕೊಂಬೆಗಳನ್ನು ತಕ್ಷಣ ಸ್ಥಳಾಂತರಿಸಿದ್ದರೆ ಇಷ್ಟೆಲ್ಲಾ ಪರದಾಡಬೇಕಾಗಿರಲಿಲ್ಲ. ತಿಂಗಳಗಟ್ಟಲೆ ಮಳೆ ಬಂದ ಕಾರಣ, ತರಗೆಲೆ ಕೊಳೆತು ತಾಲ್ಲೂಕು ಕಚೇರಿ ಸುತ್ತಮುತ್ತ ಕೆಟ್ಟ ವಾಸನೆ ಪಸರಿಸಿ, ಪರಿಸರ ಕಲ್ಮಶಗೊಂಡಿತ್ತು.
ಪೌರ ಕಾರ್ಮಿಕರು ಕೊಂಬೆ ತೆಗೆಯುವ ಸಂದರ್ಭದಲ್ಲಿ ವಿಷ ಜಂತುಗಳು ಕಚ್ಚಿದ್ದರೆ ಅವರ ಕುಟುಂಬಕ್ಕೆ ಯಾರು ಹೊಣೆ? ಕಚೇರಿ ಸುತ್ತಮುತ್ತ ಸ್ವಚ್ಛತೆ ಇಲ್ಲವಾಗಿದ್ದು, ಅನೈರ್ಮಲ್ಯ ತಾಂಡವವಾಡುತ್ತಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ತಾಲ್ಲೂಕು ಕಚೇರಿಯನ್ನು ಸ್ವಚ್ಛವಾಗಿಡುವ ಮೂಲಕ ಉತ್ತಮ ವಾತಾವರಣ ಕಲ್ಪಿಸಬೇಕು.
-ಪ್ರೇಮ್ ಕುಮಾರ್, ಸ್ಥಳೀಯ ಜೆರಾಕ್ಷ್ ಅಂಗಡಿ ಮಾಲೀಕ
-(ಪ್ರಜಾಪ್ರಗತಿ ಫಲ ಶೃತಿ)
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ