ಒಂದು ರಾಷ್ಟ್ರ, ಒಂದು ಚುನಾವಣೆ ಬಿಲ್‌ ಮಂಡನೆಗೆ ಕೇಂದ್ರದ ತಯಾರಿ …..!

ನವದೆಹಲಿ: 

    ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರ ಉನ್ನತ ಮಟ್ಟದ ಸಮಿತಿಯ ವರದಿಯನ್ನು ಕೇಂದ್ರ ಸಚಿವ ಸಂಪುಟದ ಮುಂದೆ ಮಂಡಿಸಲು ಕೇಂದ್ರ ಕಾನೂನು ಸಚಿವಾಲಯ ಯೋಜಿಸಿದೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ.

   ಲೋಕಸಭೆ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ಸರ್ಕಾರಕ್ಕೆ 100 ದಿನಗಳ ಕಾರ್ಯಸೂಚಿಯನ್ನು ರೂಪಿಸುವಂತೆ ಎಲ್ಲಾ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಸೂಚಿಸಿದ್ದರು. ಅದರಂತೆ “ಶೀಘ್ರದಲ್ಲೇ” ವರದಿಯನ್ನು ಸಂಪುಟದ ಮುಂದೆ ಇಡುವುದು ಕಾನೂನು ಸಚಿವಾಲಯದ ಶಾಸಕಾಂಗ ಇಲಾಖೆಯ 100 ದಿನಗಳ ಕಾರ್ಯಸೂಚಿಯ ಭಾಗವಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

    ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೇತೃತ್ವದ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತ ಉನ್ನತ ಮಟ್ಟದ ಸಮಿತಿಯು ಮಾರ್ಚ್ 15 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತನ್ನ ವರದಿಯನ್ನು ಸಲ್ಲಿಸಿತ್ತು. ಮೊದಲ ಹಂತವಾಗಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳು ನಡೆದ 100 ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಸಮಿತಿ ಶಿಫಾರಸು ಮಾಡಿತ್ತು. ಅಂತೆಯೇ ಸಮಿತಿಯು ಮಾಡಿದ ಶಿಫಾರಸುಗಳ ಅನುಷ್ಠಾನವನ್ನು ಪರಿಶೀಲಿಸಲು ‘ಇಂಪ್ಲಿಮೆಂಟೇಶನ್ ಗ್ರೂಪ್’ (ಅನುಷ್ಠಾನ ತಂಡ) ಅನ್ನು ಸ್ಥಾಪಿಸಲು ಸಮಿತಿಯು ತನ್ನ ವರದಿಯಲ್ಲಿ ಪ್ರಸ್ತಾಪಿಸಿದೆ.

   ಏಕಕಾಲಿಕ ಚುನಾವಣೆಗಳು ಸಂಪನ್ಮೂಲಗಳನ್ನು ಉಳಿಸಲು ಸಹಾಯ ಮಾಡುತ್ತದೆ, ಅಭಿವೃದ್ಧಿ ಮತ್ತು ಸಾಮಾಜಿಕ ಒಗ್ಗಟ್ಟನ್ನು ಉತ್ತೇಜಿಸುತ್ತದೆ, “ಪ್ರಜಾಪ್ರಭುತ್ವದ ಅಡಿಪಾಯ” ವನ್ನು ಆಳಗೊಳಿಸುತ್ತದೆ ಮತ್ತು ಅದು ಭಾರತದ ಆಶಯಗಳನ್ನು ಸಾಕಾರಗೊಳಿಸಲು ಸಹಾಯ ಮಾಡುತ್ತದೆ ಎಂದು ಸಮಿತಿ ಹೇಳಿದೆ. 

   ರಾಜ್ಯ ಚುನಾವಣಾ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಭಾರತೀಯ ಚುನಾವಣಾ ಆಯೋಗವು ಸಾಮಾನ್ಯ ಮತದಾರರ ಪಟ್ಟಿ ಮತ್ತು ಮತದಾರರ ಗುರುತಿನ ಚೀಟಿಗಳನ್ನು ಸಿದ್ಧಪಡಿಸುವಂತೆ ಸಮಿತಿಯು ಶಿಫಾರಸು ಮಾಡಿದ್ದು, ಪ್ರಸ್ತುತ, ಇಸಿಐ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಿಗೆ ಜವಾಬ್ದಾರರಾಗಿದ್ದರೆ, ಪುರಸಭೆಗಳು ಮತ್ತು ಪಂಚಾಯತ್‌ಗಳಿಗೆ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ರಾಜ್ಯ ಚುನಾವಣಾ ಆಯೋಗಗಳು ನಿರ್ವಹಿಸುತ್ತಿವೆ.

    ಸಮಿತಿಯು 18 ಸಾಂವಿಧಾನಿಕ ತಿದ್ದುಪಡಿಗಳನ್ನು ಶಿಫಾರಸು ಮಾಡಿದ್ದು, ಅವುಗಳಲ್ಲಿ ಹೆಚ್ಚಿನವು ರಾಜ್ಯ ಸರ್ಕಾರಗಳ ಅನುಮೋದನೆಯ ಅಗತ್ಯವಿರುವುದಿಲ್ಲ. ಆದಾಗ್ಯೂ, ಇವುಗಳಿಗೆ ಕೆಲವು ಸಂವಿಧಾನ ತಿದ್ದುಪಡಿ ಮಸೂದೆಗಳು ಬೇಕಾಗುತ್ತವೆ. ಅದನ್ನು ಸಂಸತ್ತಿನಲ್ಲಿ ಅಂಗೀಕರಿಸಬೇಕಾಗುತ್ತದೆ. ಏಕ ಮತದಾರರ ಪಟ್ಟಿ ಮತ್ತು ಏಕ ಮತದಾರರ ಗುರುತಿನ ಚೀಟಿಗೆ ಸಂಬಂಧಿಸಿದಂತೆ ಕೆಲವು ಪ್ರಸ್ತಾವಿತ ಬದಲಾವಣೆಗಳಿಗೆ ಕನಿಷ್ಠ ಅರ್ಧದಷ್ಟು ರಾಜ್ಯಗಳ ಅನುಮೋದನೆಯ ಅಗತ್ಯವಿದೆ. ಪ್ರತ್ಯೇಕವಾಗಿ, ಕಾನೂನು ಆಯೋಗವು ಏಕಕಾಲಿಕ ಚುನಾವಣೆಗಳ ಬಗ್ಗೆ ತನ್ನದೇ ಆದ ವರದಿಯನ್ನು ಶೀಘ್ರದಲ್ಲೇ ಮಂಡಿಸುವ ಸಾಧ್ಯತೆಯಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link