ಪೊಲೀಸು-ತನಿಖೆ ಹೆಸರಲ್ಲಿ ಆನ್‌ಲೈನ್ ವಂಚನೆ

ತುಮಕೂರು:

ವಿಶೇಷ ವರದಿ : ಸಾ.ಚಿ.ರಾಜಕುಮಾರ

     ಸೈಬರ್ ವಂಚನೆ ಪ್ರಕರಣಗಳು ವರದಿಯಾಗುತ್ತಲೇ ಇವೆ. ಪ್ರತಿದಿನ ಒಂದಲ್ಲಾ ಒಂದು ಕಡೆ ಹಣ ಕಳೆದುಕೊಂಡವರ ರೋದನೆ ಮಾಧ್ಯಮಗಳ ಮೂಲಕ ಬಯಲಾಗುತ್ತಿದೆ. ಅದೂ ಲಕ್ಷಾಂತರ ರೂ.ಗಳಲ್ಲಿ. ಕೇವಲ ಹತ್ತಾರು ಸಾವಿರ ರೂ.ಗಳಾದರೆ ಹೋಗಲಿ ಬಿಡು ಎನ್ನಬಹುದಿತ್ತೇನೋ. ಆದರೆ, ಹಣ ಕಳೆದುಕೊಂಡಿರುವವರು ಹೆಚ್ಚಿನ ಪಾಲು ಲಕ್ಷಾಂತರ ರೂ.ಗಳ ಪ್ರಕರಣಗಳಾಗಿವೆ.

   ಅತ್ಯಾಧುನಿಕ ತಂತ್ರಜ್ಞಾನ ಯುಗದಲ್ಲಿ ಬದುಕುತ್ತಿರುವ ನಾವು ಎಲ್ಲ ಆವಿಷ್ಕಾರಗಳತ್ತ ಮುನ್ನುಗ್ಗುತ್ತಿದ್ದೇವೆ. ಇಷ್ಟಾದರೂ ಸೈಬರ್ ವಂಚಕರನ್ನು ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ. ಅವರ ತಾಣಗಳನ್ನು ನಿಷ್ಕ್ರೀಯಗೊಳಿಸಲು ಆಗುತ್ತಿಲ್ಲ. ಅಷ್ಟೇ ಏಕೆ ಸೈಬರ್ ವಂಚಕರೆ ಪತ್ತೆಯಾಗುತ್ತಿಲ್ಲ. ಅಷ್ಟರ ಮಟ್ಟಿಗೆ ಈ ಸೈಬರ್ ವಂಚಕ ಖದೀಮರ ಜಾಲಗಳು ಬೇರುಬಿಟ್ಟಿವೆಯೇ? ಯಾವುದೋ ಮೂಲೆಯಲ್ಲಿ ಕುಳಿತು ಕೆಲವೇ ನಿಮಿಷಗಳಲ್ಲಿ ಲಕ್ಷ ಲಕ್ಷ ಹಣ ಸಂಪಾದಿಸುವ ಇಂತಹ ಕರಾಮತ್ತು ಕೈಗಳನ್ನು ಎಡೆಮುರಿ ಕಟ್ಟಲು ಸಾಧ್ಯವಾಗುತ್ತಿಲ್ಲವೆ? ಇದು ಸಾಮಾಜಿಕವಾಗಿ ಕೇಳಿಬರುತ್ತಿರುವ ಪ್ರಶ್ನೆ.

   ಮೊನ್ನೆಯಷ್ಟೆ ಪ್ರಧಾನಿ ನರೇಂದ್ರ ಮೋದಿಯವರು ಸೈಬರ್ ವಂಚನೆಗಳ ಕೃತ್ಯಗಳನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ಅವರ ಭಾಷಣದಲ್ಲಿ ಜನತೆಗೆ ಎಚ್ಚರಿಕೆ ನೀಡಿದ್ದಾರೆ. ಡಿಜಿಟಲ್ ಅರೆಸ್ಟ್ ಸೇರಿ ವಿವಿಧ ರೀತಿಯ ವಂಚನೆಗಳ ಮೂಲಕ ಜನರ ಹಣ ಮತ್ತು ಖಾಸಗಿ ಮಾಹಿತಿಯನ್ನು ಕದಿಯುವವರ ಜಾಲ ಹೆಚ್ಚಾಗಿದೆ. ಜನರು ಇವುಗಳ ಬಗ್ಗೆ ಎಚ್ಚರ ವಹಿಸಬೇಕು, ಜಾಗೃತಿಯೊಂದೇ ರಕ್ಷಣೆಯ ದಾರಿ ಎಂದಿದ್ದಾರೆ.

   ಅಂದರೆ, ಜನತೆಗೆ ಈಗ ಉಳಿದಿರುವುದೊಂದೇ ಮಾರ್ಗ ಸೈಬರ್ ವಂಚಕ ಕೃತ್ಯಗಳ ವಿರುದ್ಧ ಜಾಗೃತಿ ವಹಿಸುವುದು. ಎಲ್ಲರ ಬಳಿಯೂ ಮೊಬೈಲ್‌ಗಳು ಇರುವಾಗ, ಸಾಮಾಜಿಕ ಜಾಲತಾಣಗಳು ಸಕ್ರಿಯವಾಗಿರುವಾಗ, ಡಿಜಿಟಲ್ ಆನ್‌ಲೈನ್ ಹಣಕಾಸು ವ್ಯವಹಾರಗಳು ನಡೆಯುತ್ತಿರುವಾಗ, ಆನ್‌ಲೈನ್ ಮಾಹಿತಿ ತಂತ್ರಜ್ಞಾನದ ಬಳಕೆ ಅನಿವಾರ್ಯ ಎನ್ನಿಸಿರುವಾಗ… ಸೈಬರ್ ವಂಚನೆಗಳಿಂದ ಜಾಗೃತಿ ವಹಿಸುವುದು ಹೇಗೆ ಎನ್ನುವತ್ತ ಈಗ ಜನರೆ ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕಿದೆ.

   ಪಾರ್ಸೆಲ್, ಗಿಫ್ಟ್‌ಗಳನ್ನು ಕಳುಹಿಸುವ ನೆಪದಲ್ಲಿ ಒಂದಷ್ಟು ದಿನಗಳ ಕಾಲ ಯಾಮಾರಿಸಿದ್ದಾಯಿತು. ಇಂತಹ ಆನ್‌ಲೈನ್ ವಂಚನೆಗಳಿಗೆ ಸಾಕಷ್ಟು ಜನ ಬಲಿಯಾಗಿ ಲಕ್ಷಾಂತರ ರೂ. ಹಣ ಕಳೆದುಕೊಂಡಿದ್ದಾರೆ. ಈಗಲೂ ಕಳೆದುಕೊಳ್ಳುತ್ತಲೇ ಇದ್ದಾರೆ.ಕಳೆದ ಒಂದು ವರ್ಷದಿಂದ ಮತ್ತೊಂದು ದಾರಿ ಹುಡುಕಿಕೊಂಡ ಆನ್‌ಲೈನ್ ವಂಚಕರು, ಪೊಲೀಸರು, ಲೋಕಾಯುಕ್ತ, ಸಿಬಿಐ, ಆದಾಯ ತೆರಿಗೆ ಇತ್ಯಾದಿ ಇಲಾಖೆಗಳ ಹೆಸರು ಹೇಳಿಕೊಂಡು ಜನರನ್ನು ಬೆಚ್ಚಿಬೀಳಿಸುತ್ತಿದ್ದಾರೆ. ತಕ್ಷಣಕ್ಕೆ ಹೆದರಿಕೊಂಡವರು ಅವರ ಮಾತುಗಳನ್ನು ನಂಬಿ ಹಣ ಕಳೆದುಕೊಂಡಿದ್ದಾರೆ. ಈ ಪ್ರಯೋಗಗಳು ಇನ್ನೂ ನಡೆಯುತ್ತಲೇ ಇವೆ.

   ಕಳೆದ ಮೇ ತಿಂಗಳಿನಲ್ಲಿ ಕರಡಿಗೋರು ಗ್ರಾಮದ ಹಿರಿಯ ನಾಗರಿಕರೊಬ್ಬರ ಮೊಬೈಲ್‌ಗೆ ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿದ್ದರು. ತಾನು ಇಂತಹ ಕಂಪನಿಯ ಕೆಲಸಗಾರ ಎಂದು ಪರಿಚಯಿಸಿಕೊಂಡಿದ್ದ ಆತ ನಿಮಗೆ ಕಳುಹಿಸಿರುವ ಪಾರ್ಸೆಲ್‌ನಲ್ಲಿ ಮಾದಕ ವಸ್ತು ಇದೆ, ಈಗ ಅದನ್ನು ಪೊಲೀಸರು ಪತ್ತೆ ಹಚ್ಚಿ ಸೀಜ್ ಮಾಡಿದ್ದಾರೆ. ಇದು ಹೇಗೆ ಆಯಿತು ಎಂಬುದು ನಮಗೂ ಸಹ ಗೊತ್ತಿಲ್ಲ. ಬೈ ಮಿಸ್ಟೇಕ್ ನಿಮ್ಮ ಹೆಸರಿಗೆ ಇದು ಬಂದುಬಿಟ್ಟಿದೆ. ಈಗ ಪೊಲೀಸರು ಅನಿವಾರ್ಯವಾಗಿ ದೂರು ದಾಖಲಿಸಬೇಕಾದ ಪರಿಸ್ಥಿತಿ ಇದೆ. ನೀವು ಅಮಾಯಕರು ಎಂಬುದು ಗೊತ್ತು.

   ಅದಕ್ಕಾಗಿಯೇ ನಿಮಗೆ ಕರೆ ಮಾಡಿದ್ದೇವೆ. ಪೊಲೀಸರಿಗೂ ಹೇಳಿ ದೂರು ದಾಖಲಿಸದಂತೆ ತಡೆ ಹಿಡಿದಿದ್ದೇನೆ. ಅವರಿಗೆ ಒಂದಿಷ್ಟು ಹಣ ಹಾಕಿ ಎಂದು ಆತಂಕ ಹುಟ್ಟಿಸಿದ್ದಾನೆ. ಹೀಗೆ ಭಯ ಹುಟ್ಟಿಸಿ ಲಕ್ಷಾಂತರ ರೂ.ಗಳನ್ನು ಆತ ದೋಚಿದ್ದ.ಮೂರು ತಿಂಗಳ ಹಿಂದೆ ತುಮಕೂರಿನ ಉದ್ಯೋಗಿಯೊಬ್ಬರು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮುಂಬೈನಿಂದ ಕರೆ ಬಂದಿದೆ. ಮಹಾರಾಷ್ಟ್ರ ಪೊಲೀಸರು ನಿಮ್ಮ ವಿರುದ್ಧ ಕೇಸು ದಾಖಲಿಸಿದ್ದಾರೆ. ನೀವು ಅಕ್ರಮ ಹಣ ವರ್ಗಾವಣೆ, ಕೆಲವು ಮಾಹಿತಿಗಳನ್ನು ಗೌಪ್ಯವಾಗಿ ಇಟ್ಟು ವ್ಯವಹಾರ ಮಾಡಿರುವುದು ಇವೆಲ್ಲವವನ್ನೂ ಪರಿಗಣಿಸಿ ಮುಂಬೈ ಪೊಲೀಸರು ಕೇಸು ದಾಖಲಿಸಿದ್ದಾರೆ. ಇದರಿಂದ ಬಿಡುಗಡೆ ಮಾಡಲು ನೀವು ಅವರಿಗೆ ಹಣ ಕೊಡಿ ಎಂದು ಕೇಳಿದ್ದಾನೆ. ತಕ್ಷಣವೆ ಎಚ್ಚೆತ್ತ ಉದ್ಯೋಗಿ ಬೆಂಗಳೂರಿನಲ್ಲಿ ತನಗೆ ಪರಿಚಯವಿದ್ದ ಪೊಲೀಸರಿಗೆ ಕರೆ ಮಾಡಿ ವಂಚನೆಯಿಂದ ಪಾರಾಗಿದ್ದಾರೆ.

   ಇಂತಹ ಹತ್ತು ಹಲವು ಪ್ರಸಂಗಗಳು ವರದಿಯಾಗುತ್ತಲೇ ಇರುತ್ತವೆ. ಬಹುಮುಖ್ಯವಾಗಿ ಈಗ ಸೈಬರ್ ವಂಚಕರು ಟಾರ್ಗೆಟ್ ಮಾಡುತ್ತಿರುವುದು ವಿದ್ಯಾರ್ಥಿಗಳ ಪೋಷಕರು ಹಾಗೂ ಉದ್ಯೋಗಿಗಳನ್ನು. ಬಹಳಷ್ಟು ಪೋಷಕರು ತಮ್ಮ ಮಕ್ಕಳನ್ನು ದೂರದ ಊರುಗಳಿಗೆ ಕಳುಹಿಸಿ ವ್ಯಾಸಂಗ ಮಾಡಿಸಿರುತ್ತಾರೆ. ನಗರಗಳಲ್ಲಿ ಮಕ್ಕಳು ಓದುತ್ತಿರುವಾಗ ಸಣ್ಣಪುಟ್ಟ ಏರುಪೇರುಗಳಾದರೂ ಪೋಷಕರಿಗೆ ಎಲ್ಲಿಲ್ಲದ ಆತಂಕ. ಇದನ್ನೇ ಬಂಡವಾಳ ಮಾಡಿಕೊಳ್ಳುವ ವಂಚಕರು ಮಕ್ಕಳನ್ನು ಮುಂದಿಟ್ಟುಕೊಂಡು ಆಟವಾಡುತ್ತಾರೆ. ನಿಮ್ಮ ಮಗ ರೆಸಾರ್ಟ್‌ನಲ್ಲಿ ಸಿಕ್ಕಿಬಿದ್ದಿದ್ದಾನೆ ಎಂತಲೂ, ಯಾವುದೋ ಲಾಡ್ಜ್‌ನಲ್ಲಿ ಯುವತಿಯೊಂದಿಗೆ ಪೊಲೀಸರಿಗೆ ಸಿಕ್ಕಿಕೊಂಡಿದ್ದಾನೆ .

   ಅವರನ್ನು ಈಗ ನೀವು ಬೇಗ ಬಿಡಿಸಿಕೊಳ್ಳದೆ ಹೋದರೆ ಮಾನ ಮರ್ಯಾದೆ ಹರಾಜಾಗಿ ಹೋಗುತ್ತದೆ ಎಂದೆಲ್ಲಾ ಆತಂಕ ಹುಟ್ಟಿಸುತ್ತಾರೆ. ಆ ಭಯದ ನಡುವೆಯೇ ಸೈಲೆಂಟ್ ಆಗಿ ಅವರಿಂದ ಹಣ ಪೀಕುವ ಕೆಲಸ ಮಾಡುತ್ತಾರೆ. ಇಂತಹ ಸಂದರ್ಭಗಳಲ್ಲಿ ಸಾವಿರಾರು ರೂ.ಗಳಿಂದ ಹಿಡಿದು ಲಕ್ಷಾಂತರ ರೂ.ಗಳವರೆಗೆ ಹಣ ವರ್ಗಾವಣೆಯಾಗುತ್ತದೆ.

   ಮಕ್ಕಳ ಹೆಸರಿನಲ್ಲಿ ನಡೆಯುವ ಈ ವಂಚನೆಗಳು ಒಂದು ಕಡೆಯಾದರೆ, ಇನ್ನು ಕೆಲವು ಕಡೆ ನೇರವಾಗಿ ಉದ್ಯೋಗಿಗಳನ್ನೇ ಟಾರ್ಗೆಟ್ ಮಾಡಲಾಗುತ್ತದೆ. ನಿಮ್ಮ ಹೆಸರು ಲೋಕಾಯುಕ್ತ ಕಚೇರಿಯಲ್ಲಿ ದಾಖಲಾಗಿದೆ. ಯಾವುದೇ ಸಂದರ್ಭದಲ್ಲಾದರೂ ನಿಮ್ಮ ಮೇಲೆ ರೇಡ್ ಆಗಬಹುದು ಎಂದು ಹೆದರಿಸುತ್ತಾರೆ. ಸರ್ಕಾರಿ ವ್ಯವಸ್ಥೆಯಲ್ಲಿ ಇರುವವರಿಗೆ ಲೋಕಾಯುಕ್ತ ಎಂಬ ಹೆಸರು ಕೇಳಿದರೆ ಸಾಕು ನಡುಕ ಉಂಟಾಗುತ್ತದೆ. ಏಕೆಂದರೆ, ಬಹಳಷ್ಟು ಮಂದಿ ತಾವು ಗಳಿಸುವ ಆದಾಯಕ್ಕಿಂತ ಹೆಚ್ಚು ಪಟ್ಟು ಆಸ್ತಿ ಸಂಪಾದಿಸಿರುತ್ತಾರೆ. ಒಂದಲ್ಲಾ ಒಂದು ಕಡೆ ಅಕ್ರಮ, ವಂಚನೆಯ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾರೆ.

   ಇಂತಹ ಕೃತ್ಯಗಳಲ್ಲಿ ತೊಡಗಿರುವವರಿಗೆ ಹೊರಗಿನಿಂದ ಲೋಕಾಯುಕ್ತರ ಹೆಸರಿನಲ್ಲಿ ಅಥವಾ ಪೊಲೀಸರ ಹೆಸರಿನಲ್ಲಿ ಕರೆ ಬರುತ್ತಲೇ ಆತಂಕಕ್ಕೆ ಒಳಗಾಗುತ್ತಾರೆ. ಧೈರ್ಯಗುಂದಿದಾಗ ಎದುರುಗಡೆಯ ವ್ಯಕ್ತಿ ಮಾತನಾಡಿದ್ದೆಲ್ಲವೂ ಒಂದು ಹೊಸ ಮಾರ್ಗೋಪಾಯದಂತೆಯೇ ಕಾಣಸಿಗುತ್ತದೆ. ಆತನ ಮಾತು ಕೇಳುತ್ತಲೇ ಲಕ್ಷಾಂತರ ರೂ.ಗಳ ಹಣವನ್ನು ಕಳೆದುಕೊಳ್ಳುತ್ತಾರೆ.ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ಸಾರ್ವಜನಿಕರಿಗೆ ಕರೆ ಮಾಡಿ ಮಾದಕ ವಸ್ತು ಸಾಗಾಣಿಕೆ ಅಥವಾ ಇತರೆ ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯನ್ನಾಗಿ ಮಾಡುತ್ತಿರುವ ಬಗ್ಗೆ ಸುಳ್ಳು ಮಾಹಿತಿ ನೀಡುತ್ತಾರೆ. ಇಂತಹ ಮಾಹಿತಿಗಳು ಅಥವಾ ಸಂದೇಶಗಳು ಬಂದ ಕೂಡಲೇ ಒಂದಷ್ಟು ನಿಮಿಷಗಳ ಕಾಲ ಕರೆ ಸ್ವೀಕರಿಸಿದವರು ಸ್ಥಿತಪ್ರಜ್ಞರಾಗಬೇಕು. ಗಾಬರಿಯಾಗದಂತೆ ಸಹಜ ಸ್ಥಿತಿಗೆ ನರಳಬೇಕು. ೧೧೨ ಅಥವಾ ಪರಿಚಯಸ್ಥ ಪೋಲೀಸರಿಗೆ ಕರೆ ಮಡಬೇಕು. ಆಗ ಮಾತ್ರವೆ ಸೇಫ್ ಆಗಲು ಸಾಧ್ಯ ಎನ್ನುತ್ತಾರೆ ಪೊಲೀಸರು.

  ಪೊಲೀಸರ ವೇಷ ಧರಿಸಿ ಕೆಲವೊಮ್ಮೆ ವಿಡಿಯೋ ಕಾಲ್ ಮಾಡುವ ಸೈಬರ್ ವಂಚಕರು ನಿಮ್ಮನ್ನು ಈಗ ನೇರವಾಗಿಯೇ ವಿಚಾರಣೆ ಮಾಡಬೇಕಿದೆ. ಇಂತಹ ಪ್ರಕರಣಗಳಲ್ಲಿ ನಿಮ್ಮ ಹೆಸರಿದೆ, ನಾವು ಕೇಳುವ ಮಾಹಿತಿ ಒದಗಿಸಿ ಎಂದು ವ್ಯಕ್ತಿಗಳನ್ನು ಮೊಬೈಲ್ ಮೂಲಕವೇ ಸೆರೆ ಹಿಡಿದಿಟ್ಟುಕೊಂಡು ಎಲ್ಲ ಮಾಹಿತಿ ಪಡೆದು ಹಣ ಎಗರಿಸುವ ದಂಧೆಯೂ ವ್ಯಾಪಕವಾಗಿದೆ. ವಿಜಯಪುರದ ಸಂತೋಷಪಾಟೀಲ ಎಂಬುವರು ತನಗಾದ ಅನುಭವವನ್ನು ಈ ಹಿಂದೆ ಹೇಳಿಕೊಂಡಿದ್ದರು. ಇವರಿಗೆ ಕರೆ ಮಾಡಿದ್ದ ವ್ಯಕ್ತಿಯು ನಿಮ್ಮ ಆಧಾರ್‌ಗೆ ಹೊಸ ಮೊಬೈಲ್ ನಂಬರ್ ಆಕ್ಟೀವ್ ಆಗಿದೆ.

   ಆ ನಂಬರ್‌ನಿಂದ ತುಂಬಾ ಕೆಟ್ಟ ಮೆಸೇಜ್‌ಗಳು ಹೋಗಿದ್ದು, ಜನರಿಗೆ ತಲುಪುತ್ತಿವೆ. ಈ ಬಗ್ಗೆ ಮುಂಬೈ ಸೈಬರ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ನೀವು ನಿಮ್ಮ ಮೊಬೈಲ್ ನಂಬರನ್ನು ನೀವೇ ಬಳಸುತ್ತಿದ್ದೀರಾ ಅಥವಾ ಬೇರೆಯವರಿಗೆ ಕೊಟ್ಟಿದ್ದೀರಾ ಎಂದು ಕೇಳುವ ಮೂಲಕ ಸಂತೋಷ್ ಅವರನ್ನು ತಮ್ಮ ವಂಚನೆಯ ಗಾಳಕ್ಕೆ ಸೆಳೆದುಕೊಳ್ಳಲು ಪ್ರಯತ್ನಿಸಿದ್ದಾರೆ.

   ಇತ್ತೀಚೆಗೆ ತುಮಕೂರಿನಲ್ಲಿ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯನ್ನೇ ಹ್ಯಾಕ್ ಮಾಡಿ ೧೩ ಲಕ್ಷ ರೂ. ಗಳನ್ನು ತಮಗೆ ವರ್ಗಾಯಿಸಿಕೊಂಡಿದ್ದಾರೆ. ಸದಾಶಿವನಗರದ ವ್ಯಕ್ತಿಯೊಬ್ಬರು ಎಟಿಎಂನಿಂದ ೫ ಸಾವಿರ ರೂ. ಹಣ ವಿತ್ ಡ್ರಾ ಮಾಡಿಕೊಂಡಿದ್ದಾರೆ. ಆನಂತರ ನಿರಂತರವಾಗಿ ಹಣ ಕಡಿತವಾಗುತ್ತಿದ್ದು, ತನ್ನ ಮೊಬೈಲ್‌ಗೆ ಸಂದೇಶ ರವಾನೆಯಾಗಿದೆ. ಬ್ಯಾಂಕ್‌ನಲ್ಲಿ ವಿಚಾರಿಸಲಾಗಿ ಖಾತೆ ಹ್ಯಾಕ್ ಆಗಿದ್ದು, ಒಟ್ಟು ೧೩ ಲಕ್ಷ ರೂ. ಬಿಡಿಸಿಕೊಂಡಿರುವುದು ಪತ್ತೆಯಾಗಿದೆ. ಇದು ಹೇಗೆ ಆಯಿತು ಎಂಬುದು ತಿಳಿದಿಲ್ಲ. ಈ ಬಗ್ಗೆ ಸದರಿ ವ್ಯಕ್ತಿಯು ದೂರು ನೀಡಿದ್ದಾರೆ.

  ಜನರ ಆತಂಕ ಮತ್ತು ಭಯವೆ ವಂಚಕರಿಗೆ ಬಂಡವಾಳವಾಗುತ್ತಿದೆ. ಸಾಮಾನ್ಯ ವಹಿವಾಟುಗಳಲ್ಲಿ ನಿರತರಾಗಿರುವ ಜನರಿಗೆ ಸಿಬಿಐ, ಆದಾಯ ಇಲಾಖೆ, ಜಾರಿ ನಿರ್ದೇಶನಾಲಯ, ವಾಣಿಜ್ಯ ತೆರಿಗೆ ಇಲಾಖೆ, ಪೊಲೀಸ್, ಲೋಕಾಯುಕ್ತ ಹೀಗೆ ವಿವಿಧ ಹೆಸರುಗಳನ್ನು ಕೇಳಿದರೆ ಭಯಪಡುವ ಕಾಲಘಟ್ಟದಲ್ಲಿ ಅಂತಹ ಪದನಾಮಗಳನ್ನೇ ಉಪಯೋಗಿಸಿಕೊಂಡು ದೊಡ್ಡ ಮಟ್ಟದ ವಂಚನೆಗೆ ಇಳಿದಿರುವ ಸೈಬರ್ ಖದೀಮರ ಬಗ್ಗೆ ಸರ್ಕಾರಿ ತನಿಖಾ ಸಂಸ್ಥೆಗಳು ಅವರ ಪತ್ತೆಗೆ ಜರೂರು ಕ್ರಮಗಳನ್ನು ಕೈಗೊಳ್ಳಬೇಕು. ಇದರ ಜೊತೆಗೆ ಸಾರ್ವಜನಿಕ ಜಾಗೃತಿಯನ್ನೂ ಮೂಡಿಸಬೇಕು.

   ಅಪರಿಚಿತರು ತನಿಖಾ ಸಂಸ್ಥೆಗಳ ಸೋಗಿನಲ್ಲಿ ಕರೆ ಮಾಡಿದರೆ ಕೂಡಲೇ ರಾಷ್ಟ್ರೀಯ ಸೈಬರ್ ಸಹಾಯವಾಣಿ ಸಂಖ್ಯೆ ೧೯೩೦ ಇದಕ್ಕೆ ಕರೆ ಮಾಡಿ ದೂರು ನೀಡುವ, ಆನಂತರ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವ ಅವಕಾಶಗಳ ಬಗ್ಗೆ ಜನತೆಗೆ ತಿಳಿಹೇಳಬೇಕು. ನಮ್ಮ ದೇಶದಲ್ಲಿ ಈಗಷ್ಟೇ ವಿವಿಧ ವರ್ಗಗಳ ಜನ ಆನ್‌ಲೈನ್, ಡಿಜಿಟಲ್ ವ್ಯವಸ್ಥೆಯನ್ನು ಅಳವಡಿಸಿಕೊಂಡು ಮುನ್ನುಗ್ಗುತ್ತಿರುವ ಸಮಯದಲ್ಲಿ ಈ ಅವಕಾಶಗಳೇ ಕೆಲವರಿಗೆ ಬಂಡವಾಳವಾಗುತ್ತಿವೆ. ಕಷ್ಟಪಟ್ಟು ದುಡಿದವರ ಹಣ ಕ್ಷಣಾರ್ಧದಲ್ಲಿ ಹೀಗೆ ಮಾಯವಾದರೆ ಅವರ ನೋವನ್ನು, ಸಂಕಟಗಳನ್ನು ನಿವಾರಣೆ ಮಾಡುವವರು ಯಾರು?

Recent Articles

spot_img

Related Stories

Share via
Copy link