ನವದೆಹಲಿ
ಭಾರತೀಯ ಸೇನೆಯು ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಿದೆ. ಪಾಕಿಸ್ತಾನ ಮತ್ತು ಪಿಒಕೆಯಲ್ಲಿರುವ 9 ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ಸಶಸ್ತ್ರ ಪಡೆಗಳು ವೈಮಾನಿಕ ದಾಳಿ ನಡೆಸಿವೆ ಎಂದು ರಕ್ಷಣಾ ಸಚಿವಾಲಯ ಬುಧವಾರ ತಿಳಿಸಿದೆ. ದಾಳಿಯ ಕೆಲವೇ ಗಂಟೆಗಳ ನಂತರ, ಪಾಕಿಸ್ತಾನವು ಗಡಿಯಲ್ಲಿ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದೆ. ಏತನ್ಮಧ್ಯೆ, ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಜಮ್ಮು ಮತ್ತು ಕಾಶ್ಮೀರ ವಾಯುನೆಲೆಯನ್ನು ಮುಚ್ಚಲಾಗಿದೆ ಎಂದು ಭಾರತೀಯ ವಾಯುಪಡೆಯ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಇಂದು ಶ್ರೀನಗರ ವಿಮಾನ ನಿಲ್ದಾಣದಿಂದ ಯಾವುದೇ ಪ್ರಯಾಣಿಕ ವಿಮಾನಗಳು ಕಾರ್ಯನಿರ್ವಹಿಸುವುದಿಲ್ಲ. ಇಂದಿನ ಎಲ್ಲಾ ವಿಮಾನಗಳನ್ನು ರದ್ದುಪಡಿಸಲಾಗಿದೆ. ಏತನ್ಮಧ್ಯೆ, ಇಂಡಿಗೊ ಏರ್‌ಲೈನ್ಸ್ ಕೂಡ ಪ್ರಯಾಣ ಪ್ರಕಟಣೆ ಹೊರಡಿಸಿದೆ. ಶ್ರೀನಗರ, ಜಮ್ಮು, ಅಮೃತಸರ, ಲೇಹ್, ಚಂಡೀಗಢ ಮತ್ತು ಧರ್ಮಶಾಲಾಕ್ಕೆ ಹೋಗುವ ಮತ್ತು ಅಲ್ಲಿಂದ ಹೊರಡುವ ವಿಮಾನಗಳ ಮೇಲೆ ಪರಿಣಾಮ ಬೀರಿದೆ ಎಂದು ಇಂಡಿಗೋ ಅಧಿಕೃತ ಪ್ರಕಟಣೆ ತಿಳಿಸಿದೆ. ವಿಮಾನ ನಿಲ್ದಾಣ ತಲುಪುವ ಮೊದಲು ಪ್ರಯಾಣಿಕರು ಇಂಡಿಗೊದ ವೆಬ್‌ಸೈಟ್‌ನಲ್ಲಿ ಅಪ್ಡೇಟ್ಗಳನ್ನು ತಿಳಿದುಕೊಮಡು ಬರಬೇಕು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಬಿಕಾನೆರ್‌ಗೆ ತೆರಳಿದ ಮತ್ತು ಅಲ್ಲಿಂದ ಹೊರಡುವ ವಿಮಾನಗಳ ಮೇಲೆ ವೈಮಾನಿಕ ನಿರ್ಬಂಧಗಳು ಪರಿಣಾಮ ಬೀರುತ್ತವೆ ಎಂದು ಇಂಡಿಗೋ ಏರ್‌ಲೈನ್ಸ್ ಎಕ್ಸ್ ಪೋಸ್ಟ್ನಲ್ಲಿ ಮಾಹಿತಿ ನೀಡಿದೆ. ವಿಮಾನ ನಿಲ್ದಾಣಕ್ಕೆ ಬರುವ ಮೊದಲು ಏರ್ಲೈನ್ಸ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಲು ವಿನಂತಿಸುತ್ತೇವೆ . ಮಂಗಳವಾರ ಸಂಜೆ ಭಾರತ ಸರ್ಕಾರವು ಪಾಕಿಸ್ತಾನ ಗಡಿಯಲ್ಲಿ ವೈಮಾನಿಕ ಕಾರ್ಯಾಚರಣೆಗಾಗಿ ನೋಟಾಮ್ ಹೊರಡಿಸಿತ್ತು ಎಂದು ಇಂಡಿಗೋ ತಿಳಿಸಿದೆ.
