ಅನರ್ಹತೆ ಪ್ರಕರಣ : ಕಪ್ಪು ಬಟ್ಟೆ ಧರಿಸಿ ವಿಪಕ್ಷಗಳ ಪ್ರತಿಭಟನೆ
ನವದೆಹಲಿ:
ಅದಾನಿ ವಿವಾದ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಅನರ್ಹಗೊಳಿಸಿದ ಕೇಂದ್ರದ ವಿರುದ್ಧ ಖಂಡನೆ ವ್ಯಕ್ತಪಡಿಸಿರುವ ವಿರೋಧ ಪಕ್ಷಗಳು, ಕಪ್ಪು ಬಟ್ಟೆ ಧರಿಸಿ ಸಂಸತ್ತಿನ ಸಂಕೀರ್ಣದಿಂದ ರಾಷ್ಟ್ರ ರಾಜಧಾನಿಯ ವಿಜಯ್ ಚೌಕ್’ನತ್ತ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾರೆ.
ಪ್ರತಿಪಕ್ಷದ ಸಂಸದರು ಸಂಸತ್ತಿನ ಸಂಕೀರ್ಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದು, ಅದಾನಿ ಪ್ರಕರಣವನ್ನು ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಗೆ ಒಪ್ಪಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಬಿಆರ್‌ಎಸ್, ಸಮಾಜವಾದಿ ಪಕ್ಷ ಸೇರಿದಂತೆ ಸಮಾನ ಮನಸ್ಕ ವಿಪಕ್ಷಗಳ ಸಂಸದರು ಭಾಗಿಯಾಗಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಸೇರಿದಂತೆ ಹಲವು ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಪಾದಯಾತ್ರೆ ವೇಳೆ ಖರ್ಗೆ ಅವರು ಇತರ ಸಂಸದರ ಕೈ ಹಿಡಿದು ಹೆಜ್ಜೆ ಹಾಕುತ್ತಿರುವುದು ಕಂಡು ಬಂದಿದೆ. ಈ ಮೂಲಕ ವಿಪಕ್ಷಗಳು ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ.ಇದರ ಜೊತೆಗೆ ಸತ್ಯಮೇವ ಜಯತೆ ಎಂಬ ಬ್ಯಾನರ್’ನ್ನೂ ಕೂಡ ಹಿಡಿದು ಪ್ರತಿಭಟನೆ ನಡೆಸಲಾಗುತ್ತಿದೆ. ಇತರ ವಿರೋಧ ಪಕ್ಷದ ಸಂಸದರು ಭಿತ್ತಿಪತ್ರಗಳನ್ನು ಹಿಡಿದುಕೊಂಡಿದ್ದಾರೆ. ಸಂಸದರು ಕೇಂದ್ರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅದಾನಿ ಜೊತೆ ಸೇರಿಸಿದ್ದು, ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.
ಪ್ರತಿಭಟನೆ ವೇಳೆ ಮಾತನಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ಕೆಲವು ವರ್ಷಗಳಲ್ಲಿ ಅದಾನಿ ಸಂಪತ್ತು ಇಷ್ಟೊಂದು ಮಟ್ಟದಲ್ಲಿ ಹೆಚ್ಚಳವಾಗಿದ್ದು ಹೇಗೆ? ಮೋದಿಯವರೇ ವಿದೇಶಕ್ಕೆ ಹೋಗುವಾಗ ಉದ್ಯಮಿಯನ್ನು ಎಷ್ಟು ಬಾರಿ ಜೊತೆಗೆ ಕರೆದುಕೊಂಡು ಹೋಗಿದ್ದಿರಿ? ಅದಾನಿ ವಿಚಾರ ಸಂಬಂಧ ವಿಪಕ್ಷಗಳು ಎತ್ತುತ್ತಿರುವ ಪ್ರಶ್ನೆಗಳಿಗೆ ಮೋದಿಯವರು ಉತ್ತರ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
“ನಮಗೆ ಅದಾನಿ ವಿಚಾರದಲ್ಲಿ ಜೆಪಿಸಿ ಬೇಕು. ಸರ್ಕಾರ ಇದನ್ನು ಏಕೆ ಒಪ್ಪುತ್ತಿಲ್ಲ? ಜೆಪಿಸಿ ತನಿಖೆಗೆ ಏಕೆ ಹೆದರುತ್ತಿದ್ದೀರಿ… ಅಂದರೆ ‘ದಾಲ್ ಮೇ ಕುಚ್ ಕಾಲಾ ಹೈ’ (ಏನೋ ತಪ್ಪಾಗಿದೆ)” ಎಂದು ತಿಳಿಸಿದ್ದಾರೆ.