ನವದೆಹಲಿ:
ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಸಿಬ್ಬಂದಿಯನ್ನು ಭಯೋತ್ಪಾದಕರು ಹತ್ಯೆ ಮಾಡಿದ ದಿನದಂದೇ ಬಿಜೆಪಿ ಜಿ20 ಶೃಂಗಸಭೆಯ ಯಶಸ್ಸಿನ “ಸಂಭ್ರಮಾಚರಣೆ” ನಡೆಸಿದೆ ಎಂದು ಇಂಡಿಯಾ ಮೈತ್ರಿಕೂಟದ ಹಲವು ಪಕ್ಷಗಳು ಟೀಕಿಸಿವೆ.
ದೇಶದಲ್ಲಿ ಏನೇ ಸಂಭವಿಸಿದರೂ ಪ್ರಧಾನಿ ನರೇಂದ್ರ ಮೋದಿಯವರು ಪುರಸ್ಕಾರ ಸ್ವೀಕರಿಸುವುದನ್ನು ಮಾತ್ರ ಮುಂದೂಡುವುದಿಲ್ಲ ಎಂದು ಕಾಂಗ್ರೆಸ್ ಕಿಡಿ ಕಾರಿದೆ.
ಬುಧವಾರ ಬೆಳಗ್ಗೆ ಅನಂತನಾಗ್ ಜಿಲ್ಲೆಯ ಗರೋಲ್ ಪ್ರದೇಶದಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ 19ನೇ ರಾಷ್ಟ್ರೀಯ ರೈಫಲ್ಸ್ ಕಮಾಂಡಿಂಗ್ ಆಫೀಸರ್ ಕರ್ನಲ್ ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ಧೋನಾಕ್ ಮತ್ತು ಉಪ ಅಧೀಕ್ಷಕ ಹುಮಾಯೂನ್ ಭಟ್ ಹುತಾತ್ಮರಾಗಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಕಾಂಗ್ರೆಸ್, ಪ್ರಧಾನಿ ಮೋದಿಗೆ “ಸೂಕ್ಷ್ಮತೆ ಇಲ್ಲ”. ಒಂದು ಕಡೆ ಮೃತ ಯೋಧನ ಕುಟುಂಬ ಸದಸ್ಯರ ದುಃಖದ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಮತ್ತೊಂದು ಕಡೆ ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ 20 ಶೃಂಗಸಭೆ ಯಶಸ್ವಿಯಾಗಿದ್ದಕ್ಕೆ ಬುಧವಾರ ಸಂಜೆ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸಂಭ್ರಮಾಚರಣೆ ಆಯೋಜಿಸಿ, ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ ನೀಡಲಾಗಿದೆ ಎಂದು ಟೀಕಿಸಿದೆ.
ನಮ್ಮ ಸೇನೆಯ ಮೂವರು ಅಧಿಕಾರಿಗಳು ಹುತಾತ್ಮರಾಗಿರುವ ದುಃಖದ ಸುದ್ದಿ ಬರುತ್ತಿರುವ ಸಮಯದಲ್ಲಿ, ಬಿಜೆಪಿ ಕೇಂದ್ರ ಕಚೇರಿಯಲ್ಲಿ “ಬಾದ್‌ಶಾಹಗಾಗಿ ಸಂಭ್ರಮಾಚರಣೆ ಆಯೋಜಿಸಲಾಗಿದೆ” ಎಂದು ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರು ಟ್ವೀಟ್ ಮಾಡಿದ್ದಾರೆ.
ಶಿವಸೇನೆ-ಉದ್ಧವ್ ಠಾಕ್ರೆ ಬಣದ ನಾಯಕಿ ಪ್ರಿಯಾಂಕಾ ಚತುರ್ವೇದಿ ಅವರು ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪ್ರಧಾನಿಗೆ ಅದ್ದೂರಿ ಸ್ವಾಗತ ನೀಡಿದ ವಿಡಿಯೋ ಹಂಚಿಕೊಂಡಿದ್ದು, “ಇದನ್ನು ಮುಂದೂಡಬಹುದಿತ್ತು, ಇವರಿಂದ ಹೆಚ್ಚು ಸೂಕ್ಷ್ಮತೆಯನ್ನು ನಿರೀಕ್ಷಿಸಬಹುದು. ವಿಶೇಷವಾಗಿ ನಮ್ಮ ಭದ್ರತಾ ಪಡೆಗಳು ಹೋರಾಡಿದ ದಿನ. ಕಾಶ್ಮೀರದಲ್ಲಿ ಉಗ್ರರೊಂದಿಗೆ ಭೀಕರ ಕಾಳಗ ನಡೆದ ದಿನ ಇದು ಬೇಕಿತ್ತಾ” ಎಂದು ಪ್ರಶ್ನಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ